`ಸವಿರುಚಿ` ಸಂಚಾರಿ ಕ್ಯಾಂಟೀನ್`ಗೆ ಸಿದ್ದರಾಮಯ್ಯ ಚಾಲನೆ
ಜಿಲ್ಲಾ ಕೇಂದ್ರಗಳಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ `ಸವಿರುಚಿ ಸಂಚಾರಿ` ಕ್ಯಾಂಟೀನ್ ಯೋಜನೆಗೆ ಮಂಗಳವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ 'ಸವಿರುಚಿ ಸಂಚಾರಿ' ಕ್ಯಾಂಟೀನ್ ಯೋಜನೆಗೆ ಮಂಗಳವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
'ಸವಿರುಚಿ' ಹೆಸರಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಲು ರಾಜ್ಯಸ ಸರ್ಕಾರ ಉದ್ದೇಶಿಸಿದ್ದು, ಇಂದು ಆ ಯೋಜನಗೆ ಚಾಲನೆ ನೀಡಲಾಯಿತು. ಈ ಸವಿರುಚಿ ಕ್ಯಾಂಟೀನ್‌ಗಳಲ್ಲಿ ಆಹಾರ ಪದಾರ್ಥಗಳು ಕಡಿಮೆ ಬೆಲೆಯಲ್ಲಿ ಸಿಗಲಿವೆ. ಸಭೆ, ಸಮಾರಂಭ, ಪುಸ್ತಕ ಪ್ರದರ್ಶನದಂತಹ ಕಾರ್ಯಕ್ರಮಗಳು, ಕೋರ್ಟ್, ಕಚೇರಿಗಳ ಮುಂದೆ ಹೀಗೆ ಆಹಾರಕ್ಕೆ ಬೇಡಿಕೆ ಇರುವ ಪ್ರದೇಶಗಳಲ್ಲಿ ಈ ಕ್ಯಾಂಟೀನ್ ಕಾರ್ಯನಿರ್ವಹಿಸಲಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, 30 ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳಿಗೆ ಸುಸಜ್ಜಿತ ಸಂಚಾರಿ ಕ್ಯಾಂಟೀನ್ ವಾಹನವನ್ನು ನೀಡಲಾಗುವುದು. ಪ್ರತಿ ಜಿಲ್ಲೆಗೆ ₹10 ಲಕ್ಷ ಬಡ್ಡಿ ರಹಿತ ಸಾಲ ನೀಡಿದ್ದು, ಆರು ತಿಂಗಳ ನಂತರ ₹15 ಸಾವಿರದಂತೆ ಸಾಲ ಮರುಪಾವತಿ ಮಾಡಬೇಕು. ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಈ ಸಂಚಾರಿ ಕ್ಯಾಂಟೀನ್'ನಲ್ಲಿ ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುನುಗುನವಾಗಿ ಅಡುಗೆ ತಯಾರಿಸಿ, ಅಲ್ಲಿನ ಹೊಟೇಲ್‌ಗಳು ನಿಗದಿ ಮಾಡುವ ದರಕ್ಕಿಂತ ₹5 ಕಡಿಮೆ ಇರುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲಿ 11 ಮಹಿಳೆಯರು ಕಾರ್ಯನಿರ್ವಹಿಸಲಿದ್ದು, ವಾರದಲ್ಲಿ ಒಂದೆರಡು ದಿನ ಸಿರಿಧಾನ್ಯ ಅಡುಗೆ ದೊರೆಯಲಿದೆ.