ಕಲಬುರಗಿ : ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಅವರ ನಿಜ ಬಣ್ಣ ಬಯಲಾಗಿದೆ. ಇದರಿಂದ ಅವರು ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. 


COMMERCIAL BREAK
SCROLL TO CONTINUE READING

ಅವರು ಇಂದು ಜೇವರ್ಗಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮ ಪ್ರಜಾಧ್ವನಿ- 2 ರಲ್ಲಿ ಭಾಗವಹಿಸಿ ಮಾತನಾಡಿದರು. 2014 ರಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಲಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರನ್ನು ನಂಬಿ ಜನರು ಮತ ನೀಡಿದ್ದರು. 


2019 ರಲ್ಲಿ ಸಂವಿಧಾನದ ಆರ್ಟಿಕಲ್‌ 370 ರದ್ದತಿ, ಪುಲ್ವಾಮಾ ದಾಳಿಯಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದರು. ಆದರೆ 2024 ರಲ್ಲಿ ಮತ್ತೆ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.


ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರ ವಿರುದ್ಧ ʼಅಡ್ಜೆಸ್ಟ್​ಮೆಂಟ್ʼ ಬಾಂಬ್‌ ಸಿಡಿಸಿದ ಜನಾರ್ದನ್ ರೆಡ್ಡಿ!


ಇದು ಬಹಳ ಮಹತ್ವದ ಚುನಾವಣೆ ಎಂದು ತಾವೆಲ್ಲ ಅರ್ಥ ಮಾಡಿಕೊಂಡಿದ್ದೀರಿ. ಮುಂದಿನ ಐದು ವರ್ಷ ಯಾವ ಪಕ್ಷ ಅಧಿಕಾರದಲ್ಲಿರಬೇಕು, ದೇಶದ ಭವಿಷ್ಯವನ್ನು ಯಾರು ನಿರ್ಮಾಣ ಮಾಡುತ್ತಾರೆ, ಈ ದೇಶದ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಕಾರ್ಮಿಕರು- ಇವೆರೆಲ್ಲರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಕೊಡುತ್ತಾರೆ, ಯಾರು ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ, ಯಾರು ನಡೆದುಕೊಳ್ಳುವುದಿಲ್ಲ ಎಂಬುದನ್ನು ಪರಿಶೀಲನೆ ಮಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.


ನರೇಂದ್ರ ಮೋದಿಯವರ ಸುಳ್ಳುಗಳನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಇದರಿಂದ ಹತಾಶರಾಗಿ ಮೋದಿಯವರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿಯವರನ್ನು ಬೈಯುತ್ತಿದ್ದಾರೆ. ಜೊತೆಗೆ ಅತ್ಯಂತ ಮಹಾನ್‌ ಸುಳ್ಳುಗಳನ್ನು ಜನರ ಮುಂದೆ ಹೇಳುತ್ತಾ ತಿರುಗುತ್ತಿದ್ದಾರೆ ಎಂದು ಅವರು ತಿಳಿಸಿದರು.


ಬಿಜೆಪಿ ಯಾವುದೇ ರಾಜ್ಯದಲ್ಲಿ ಎಸ್ ಸಿ ಎಸ್ ಪಿ/ ಟಿಎಸ್ ಪಿ ಕಾಯ್ದೆ ಜಾರಿ ಮಾಡಿಲ್ಲ : ಎಸ್‌.ಸಿ.ಎಸ್‌.ಪಿ. / ಟಿ.ಎಸ್.ಪಿ ಕಾಯ್ದೆಯಲ್ಲಿರುವ ಹಣವನ್ನು ನಾವು ಬೇರೆ ಬಾಬುಗಳಿಗೆ ಖರ್ಚು ಮಾಡಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಇದ್ದ ಹಣವನ್ನು ತಲುಪಿಸಲು ಸರ್ಕಾರ ವಿಫಲವಾಗಿದೆ ಎಂದು ಸುಳ್ಳಿ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ನೀಡುವ ನೈತಿಕ ಹಕ್ಕು ನಿಮಗೆ ಏನಿದೆ ನರೇಂದ್ರ ಮೋದಿಜಿ?  ಕೇಂದ್ರದಲ್ಲಿ ನೀವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಜನಸಂಖ್ಯೆಗೆ ಆಧಾರವಾಗಿ ಹಣ ಖರ್ಚು ಮಾಡುವ ಕಾಯ್ದೆ ಮಾಡಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.


2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್ ಸಿಎಸ್ ಪಿ ಹಾಗೂ ಟಿಎಸ್ ಪಿ ಕಾಯ್ದೆ ಜಾರಿ ಮಾಡಿದೆವು. ಅಂದು 30 ಸಾವಿರ ಕೋಟಿ ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟೆವು. ನಂತರದ ಬಿಜೆಪಿ ಸರ್ಕಾರದಲ್ಲಿ ಈ ಮೊತ್ತ 26 ಸಾವಿರ ಕೋಟಿಗೆ ಇಳಿಯಿತು. ದೇಶದ ಯಾವುದೇ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಸ್ ಸಿಎಸ್ ಪಿ ಹಾಗೂ ಟಿಎಸ್ ಪಿ ಕಾಯ್ದೆಯಾಗಲಿ, ಕಾರ್ಯಕ್ರಮವಾಗಲಿ ಜಾರಿಯಾಗಿದೆಯೇ? ದಲಿತರ ಬಗ್ಗೆ ಬದ್ಧತೆಯಾಗಲಿ, ಕಾಳಜಿಯಾಗಲಿ ಇಲ್ಲದ ಬಿಜೆಪಿಯವರು ರಾಜ್ಯದಲ್ಲಿ ನಮ್ಮ ಸರ್ಕಾರವನ್ನು ಪ್ರಶ್ನಿಸಲು ನೈತಿಕತೆ ಇಲ್ಲ. ಈಗಿನ ನಮ್ಮ ಸರ್ಕಾರದ ಅವಧಿಯಲ್ಲಿ ಎಸ್ ಸಿ ಎಸ್ ಟಿ ಜನರಿಗಾಗಿ 39 ಸಾವಿರ ಕೋಟಿ ಇಟ್ಟಿದ್ದೇವೆ ಎಂದರು.


ಇದನ್ನೂ ಓದಿ:ಚಿತ್ರನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ: ಬಸವರಾಜ ಬೊಮ್ಮಾಯಿ


ಬಿಜೆಪಿ ಮೀಸಲಾತಿ ವಿರೋಧಿ : ಹಿಂದುಳಿದವರನ್ನು, ದಲಿತರನ್ನು ಮುಸಲ್ಮಾನರ ವಿರೋಧ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ಸಾಮಾಜಿಕ ನ್ಯಾಯದ ಪರ ಇಲ್ಲ. 73-74 ರಲ್ಲಿ ಸಂವಿಧಾನದಲ್ಲಿ ಮಹಿಳೆಯರಿಗೆ , ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರಿಗೆ ಮೀಸಲಾತಿ ನೀಡಿದ್ದನ್ನು ಬಿಜೆಪಿಯ ರಾಮ ಜೋಯಿಸ್ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ಬಗ್ಗೆ ಸುಳ್ಳು ಹೇಳುವ ಮೋದಿಯವರ ಹೇಳಿಕೆಗಳು, ಪ್ರಧಾನಿಯ ಹುದ್ದೆಗೆ ಶೋಭೆ ತರುವಂಥದಲ್ಲ ಎಂದರು.


ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಖರ್ಗೆಯವರ ಕೊಡುಗೆ ಅಪಾರ : ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲ ಎಂದು ಮೋದಿ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರಕ್ಕೆ ಬರಪರಿಹಾರ ನೀಡಿ ಎಂದು ರಾಜ್ಯ ಮನವಿ ಸಲ್ಲಿಸಿದ್ದರೂ, ಪೂರ್ಣಪ್ರಮಾಣದ ಪರಿಹಾರ ದೊರೆತಿಲ್ಲ. ರಾಜ್ಯದಿಂದ 4.50 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ತಲುಪುತ್ತದೆ, ಅದರಲ್ಲಿ ರಾಜ್ಯಕ್ಕೆ ದೊರೆತಿದ್ದು, 2023-24ರಲ್ಲಿ 55000 ಕೋಟಿ ಮಾತ್ರ . ಈ ಅನ್ಯಾಯವನ್ನು ಇಲ್ಲಿನ ಬಿಜೆಪಿ ಸಂಸದರು ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು. ಆದರೆ  ಈ ಭಾಗದ ಮಲ್ಲಿಕಾರ್ಜುನ ಖರ್ಗೆಯವರು ಸಂಸದರಾಗಿದ್ದರೆ, ಈ ಬಗ್ಗೆ ಕೇಂದ್ರವನ್ನು ಖಂಡಿತವಾಗಿಯೂ ಪ್ರಶ್ನಿಸುತ್ತಿದ್ದರು. ಅವರ ಸೋಲಿನಿಂದ ಈ ಭಾಗದ ಜನರಿಗೆ ಅನ್ಯಾಯವಾಗಿದೆ.  ಖರ್ಗೆ ಹಾಗೂ ಧರ್ಮಸಿಂಗ್ ಅವರ ಹೋರಾಟವಿಲ್ಲದಿದ್ದರೆ ಈ ಭಾಗಕ್ಕೆ 371 ಜೆ ಸ್ಥಾನಮಾನ ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಬಿಜೆಪಿಯ ಅದ್ವಾನಿಯವರು ಈ ಸ್ಥಾನಮಾನವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಕೊಡುಗೆಯನ್ನು ಇಲ್ಲಿನ ಜನರು ಮರೆಯಬಾರದು. ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ 5000 ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಭಾಗದ ಸಂಸದರಿಂದ ಯಾವ ಅಭಿವೃದ್ಧಿಯೂ ಆಗಲಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಖರ್ಗೆಯವರ ಕೊಡುಗೆಗೆ ಜನರು ಗೌರವ ತೋರಬೇಕೆಂದು ಜನರಿಗೆ ಕರೆ ನೀಡಿದರು.


ಬಿಜೆಪಿ ಧರ್ಮಜಾತಿಗಳ ನಡುವೆ ದ್ವೇಷ ಬಿತ್ತುತ್ತದೆ : ಬಿಜೆಪಿಯವರು ಧರ್ಮ ಹಾಗೂ ಜಾತಿಗಳ ನಡುವೆ ದ್ವೇಷವನ್ನು  ಬೆಳೆಸುತ್ತದೆ. ಅವರಿಗೆ ಜನರ ಪ್ರೋತ್ಸಾಹ ದೊರೆಯಬಾರದು. ರಾಜ್ಯದ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬಲು ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿತು. ಬಡವರ ಕೈಗೆ ಹಣ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲಾಗುತ್ತಿದೆ. 200 ಕೋಟಿ ಮಹಿಳೆಯರು ಶಕ್ತಿಯೋಜನೆ ಬಳಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಪ್ರಶಂಸೆ ದೊರೆತಿದೆ. ಬಡವರ ಕುಟುಂಬಗಳಿಗೆ ತಲಾ 5 ರಿಂದ 6 ಸಾವಿರ ಮಾಹೆಯಾನ ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಸರ್ವರಿಗೂ ಸಮಪಾಲು, ಸಮಬಾಳು ತತ್ವದಂತೆ ಕೆಲಸ ಮಾಡಿದೆ. ನಾವು ನುಡಿದಂತೆ ನಡೆಯುತ್ತೇವೆ. ಆದರೆ ಬಿಜೆಪಿಯವರು ಕೇವಲ ಕನಸುಗಳನ್ನು ಬಿತ್ತಿ ನನಸು ಮಾಡುವ ಪ್ರಯತ್ನವನ್ನು ಮಾಡುವುದಿಲ್ಲ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.