ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 21ರಿಂದ ಬಜೆಟ್ ಪೂರ್ವ ಸಿದ್ಧತಾ ಸಭೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದೆ ತಮ್ಮ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಬಜೆಟ್ ಅನ್ನೇ ಮುಂದುವರೆಸಬೇಕು ಎಂದು ಹೇಳುತ್ತಿದ್ದರೂ, ಹಿಂದಿನ ಸರ್ಕಾರದ ಆಯವ್ಯಯದ ಮುಖ್ಯ ಅಂಶಗಳು ಮತ್ತು ಜೆಡಿಎಸ್ ಪ್ರಣಾಳಿಕೆಯ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ. 


ಕೃಷಿ ಸಾಲ ಮನ್ನಾ
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಸಾಲಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಹೇಳಿದೆ. ಈಗಾಗಲೇ ಸಾಲಮನ್ನಾದ ವಿಚಾರದಲ್ಲಿ ಮಾತಿಗೆ ತಪ್ಪಿದೆ ಎನ್ನುವ ಅಪವಾದವನ್ನು ಜೆಡಿಎಸ್ ಎದುರಿಸುತ್ತಿದೆ. ಈ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಅವರು, ಹೊಸ ಬಜೆಟ್'ನಲ್ಲಿ ರೈತರ ಸಾಲ ಮನ್ನಾ ವಿಚಾರವಾಗಿ ಘೋಷಣೆ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ. 


ನೂತನ ಬಜೆಟ್ ಮಂಡನೆ ನಿರ್ಧಾರ ಸರಿಯಿದೆ: ಜಿ. ಪರಮೇಶ್ವರ್
ಇನ್ನು, ಹೊಸ ಬಜೆಟ್ ಮಂಡನೆ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಹೊಸ ಬಜೆಟ್ ಮಂಡನೆ ಉದ್ದೇಶ ಸರಿಯಾಗಿದೆ. ಕಳೆದ ಸಾಲಿನಲ್ಲಿ ಸಂಪೂರ್ಣ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡಿಸಿತ್ತು. ಆದರೀಗ ನೂತನ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೂತನ ಬಜೆಟ್ ಮಂಡನೆ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ.


ಜೂನ್ 21 ರಿಂದ ಜೂನ್ 30ರವರೆಗೆ ಸಭೆ
ನೂತನ ಬಜೆಟ್ ಮಂಡನೆಗೆ ಸಕಲ ಸಿದ್ಧತೆ ಆರಂಭಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈಗಾಗಲೇ ಅಧಿಕರಿಗಲ್ ಜೊತೆ ಸಭೆ ನಡೆಸಿದ್ದಾರೆ. ಆದರೆ ಜೂನ್ 21 ರಿಂದ ಇಲಾಖಾವಾರು ಸಭೆ ನಡೆಸಲು ಮುಂದಾಗಿರುವ ಸಿಎಂ, ಜೂನ್ 30ರವರೆಗೆ ಸಭೆ ನಡೆಸಲಿದ್ದಾರೆ. ಈಗಾಗಲೇ ಈ ಸಂಬಂಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ನಿಗದಿತ ದಿನಗಳಂದು ಸಂಬಂಧಿಸಿದ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎದ್ನು ಉನ್ನತ ಮೂಲಗಳು ತಿಳಿಸಿವೆ. ಆದರೆ ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ರಾಜ್ಯದ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಪೂರಕವಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.