ರಾಜ್ಯದ ಹಿತಾಸಕ್ತಿಯೇ ನಮ್ಮ ಸರ್ಕಾರದ ಧ್ಯೇಯ: ಸಚಿವ ಡಿ.ಕೆ.ಶಿವಕುಮಾರ್
ರಾಜ್ಯದ ಹಿತಾಸಕ್ತಿ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ರಾಜ್ಯದ ಹಿತಾಸಕ್ತಿ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದಿಲ್ಲಿ ಸರ್ಕಾರದ ಭವಿಷ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿರುವ ವಿಡಿಯೋ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ. ಸುಗಮವಾಗಿ ಆಡಳಿತ ನಡೆಯುತ್ತಿದೆ. 'ಯಾರೋ ಕಿಡಿಗೇಡಿಗಳು ಆಂತರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿನ ಪ್ರಕೃತಿ ಚಿಕಿತ್ಸಾದಲ್ಲಿರುವ ಸಿದ್ದರಾಮಯ್ಯ ಅವರು, ವ್ಯಕ್ತಿಯೊಬ್ಬರ ಜತೆ ಮಾತನಾಡುತ್ತಿರುವ ಎರಡನೇ ವೀಡಿಯೋ ಬಿಡುಗಡೆಯಾಗಿದ್ದು, ಇದರಲ್ಲಿಯೂ ಸಮ್ಮಿಶ್ರ ಸರ್ಕಾರದ ಬಗ್ಗೆ ಸಂಶಯ ಮಾತುಗಳನ್ನಾಡಿರುವುದು ಬಹಿರಂಗವಾಗಿದೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೂ ಗ್ರಾಸವಾಗಿದೆ.