ಮೈತ್ರಿ ಸರ್ಕಾರ ಒಗ್ಗಟ್ಟಾಗಿದೆ: ಖರ್ಗೆ
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಗ್ಗಟ್ಟಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಗ್ಗಟ್ಟಾಗಿದೆ. ಐದು ವರ್ಷಗಳ ಪೂರ್ಣಾವಧಿ ಸರ್ಕಾರ ನಡೆಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇಡಬೇಕು ಎಂಬುದೇ ನಮ್ಮ ಗುರಿ. ಹಾಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಸರಕಾರ ಒಗ್ಗಟ್ಟಾಗಿದೆ. ಸರ್ಕಾರ ನಡೆಸಬೇಕೆಂಬ ಇರಾದೆ ಇದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಖರ್ಗೆ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರಕಾರ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂದು ಹೇಳಿಕೆ ನೀಡಿರುವ ವೀಡಿಯೋ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ನಾನೂ ಸಹ ಆ ವೀಡಿಯೋ ಟಿವಿಯಲ್ಲಿ ಪ್ರಸಾರವಾಗಿದ್ದನ್ನು ನೋಡಿದ್ದೇನೆ. ಆದರೆ ಸಿದ್ದರಾಮಯ್ಯ ಅವರು ಯಾವ ಸಂದರ್ಭದಲ್ಲಿ ಆ ಹೇಳಿಕೆ ನೀಡಿದ್ದಾರೆ, ನಿಜವಾಗಿಯೂ ಅವರೇ ಹೇಳಿದ್ದಾರಾ ಎಂಬ ಬಗ್ಗೆ ಕೇಳಬೇಕಿದೆ. ನಾಳೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಮಾತುಕತೆ ನಡೆಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿನ ಪ್ರಕೃತಿ ಚಿಕಿತ್ಸಾದಲ್ಲಿರುವ ಸಿದ್ದರಾಮಯ್ಯ ಅವರು, ವ್ಯಕ್ತಿಯೊಬ್ಬರ ಜತೆ ಮಾತನಾಡುತ್ತಿರುವ ಎರಡನೇ ವಿಡಿಯೋ ಬಿಡುಗಡೆಯಾಗಿದ್ದು, ಇದರಲ್ಲಿಯೂ ಸಮ್ಮಿಶ್ರ ಸರ್ಕಾರದ ಬಗ್ಗೆ ಸಂಶಯ ಮಾತುಗಳನ್ನಾಡಿರುವುದು ಬಹಿರಂಗವಾಗಿದೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀರ್ವ ಚರ್ಚೆಗೂ ಗ್ರಾಸವಾಗಿದೆ.