ಬೆಂಗಳೂರು: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ. 6,000 ಮಾಸಾಶನ ನೀಡುವ ಭರವಸೆ ನೀಡಿದ್ದೆ. ಯಾರು ಏನೇ ಟೀಕೆ ಮಾಡಿದರೂ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಯೋಜನೆಯನ್ನು ಮುಂದಿನ ಬಜೆಟ್ ನಲ್ಲಿ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.


COMMERCIAL BREAK
SCROLL TO CONTINUE READING

ನ್ಯಾಷನಲ್‌ ಕಾಲೇಜಿನ ಹಳೆವಿದ್ಯಾರ್ಥಿಯಾಗಿರುವ ಕಾರಣಕ್ಕೆ ಆಡಳಿತ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾನು ಎಂದೂ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ಚುನಾವಣೆಯ ವೇಳೆ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದು ನನ್ನ ಆಂತರಿಕ ಒತ್ತಾಯದಿಂದ. ಆಸ್ಪತ್ರೆಗಳು ಬಹಳ ಕೆಟ್ಟ ಪರಿಸ್ಥಿತಿಯಲ್ಲಿವೆ. ಹಾಗಾಗಿ ಒಂದು ಬಡ ಕುಟುಂಬ 10 ರಿಂದ  20 ಲಕ್ಷ ಹಣವನ್ನು ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡುವ ಸ್ಥಿತಿಯಲ್ಲಿ ಇಲ್ಲ. ನಾನು ಮಾಡಿದ ಈ ಘೋಷಣೆಯನ್ನು ನಿಲ್ಲಿಸುವುದಿಲ್ಲ ಎಂದರು.


ಸರ್ಕಾರಿ ಸಂಸ್ಥೆಗಳಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣಹಾಕಲು ನಾನು ಬದ್ಧನಿದ್ದೇನೆ ಎಂದು ಘೋಷಿಸಿದ ಅವರು ನಾನು ಬಳಸುತ್ತಿರುವ ಸರ್ಕಾರಿ ಕಾರಿಗೆ ನನ್ನ ಸ್ವಂತ ದುಡ್ಡಿನಿಂದಲೇ ಇಂಧನವನ್ನು ಹಾಕಿಸಿಕೊಳ್ಳುತ್ತಿದ್ದೇನೆ. ಬದಲಾವಣೆ ತರಬೇಕಾದರೆ ತುಂಬಾ ಸಾಹಸ ಮಾಡಬೇಕಿದೆ. ನನ್ನ ರಾಜ್ಯದ ಜನತೆ ಕಟ್ಟುವ ತೆರಿಗೆ ಹಣವನ್ನು ದುಂದು ವೆಚ್ಚ ಮಾಡದೇ ಒಂದೊಂದು ಪೈಸೆಯೂ ಸದ್ಭಳಕೆ ಆಗಬೇಕು ಎಂದರು.