`ಕನ್ನಡದಲ್ಲಿಯೇ ವ್ಯವಹರಿಸಿ, ಇಲ್ಲದಿದ್ದರೆ ದಂಡ ನೀಡಿ`
ಈ ಕುರಿತು ನಿಯಮಾವಳಿಯನ್ನು ಜಾರಿಗೊಳಿಸಿರುವ ಬೆಂಗಳೂರು ವಿವಿ, ಆಡಳಿತವನ್ನು ಸಂಪೂರ್ಣ ಕನ್ನಡಮಯವಾಗಿಸಲು ಕ್ರಮಕೈಗೊಂಡಿದೆ. ವಿವಿ ಜಾರಿಗೊಳಿಸಿರುವ ಅಧಿಸೂಚನೆ ಪ್ರಕಾರ ` ಕೇವಲ ಮಾತೃಭಾಷೆ ಕನ್ನಡ ಹೊಂದಿರದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮಾತ್ರ ಇಂಗ್ಲಿಷ್ ಅಥವಾ ಬೇರೆ ಅಧಿಕೃತ ಭಾಷೆಯನ್ನು ಬಳಸಬಹುದಾಗಿದೆ` ಎಂದಿದೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಅಧಿಸೂಚನೆಯೊಂದನ್ನು ಜಾರಿಗೊಳಿಸಿದ್ದು, ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿನ ತನ್ನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕನ್ನಡದಲ್ಲಿಯೇ ವ್ಯವಹರಿಸಲು ಸೂಚನೆ ನೀಡಿದೆ.
ಈ ಕುರಿತು ನಿಯಮಾವಳಿಯನ್ನು ಜಾರಿಗೊಳಿಸಿರುವ ಬೆಂಗಳೂರು ವಿವಿ, ಆಡಳಿತವನ್ನು ಸಂಪೂರ್ಣ ಕನ್ನಡಮಯವಾಗಿಸಲು ಕ್ರಮಕೈಗೊಂಡಿದೆ. ವಿವಿ ಜಾರಿಗೊಳಿಸಿರುವ ಅಧಿಸೂಚನೆ ಪ್ರಕಾರ " ಕೇವಲ ಮಾತೃಭಾಷೆ ಕನ್ನಡ ಹೊಂದಿರದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮಾತ್ರ ಇಂಗ್ಲಿಷ್ ಅಥವಾ ಬೇರೆ ಅಧಿಕೃತ ಭಾಷೆಯನ್ನು ಬಳಸಬಹುದಾಗಿದೆ" ಎಂದಿದೆ. ಅಷ್ಟೇ ಅಲ್ಲ, "ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಹಲವು ಬಾರಿ ಈ ಕುರಿತು ಪತ್ರ ಬರೆದು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದು, ವಿಶ್ವವಿದ್ಯಾಲಯ ಕೂಡ ಈ ನಿಟ್ಟಿನಲ್ಲಿ ಹಲವಾರು ಬಾರಿ ತನ್ನ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂಧಿಗಳಿಗೆ ಸಂಪೂರ್ಣ ಆಡಳಿತವನ್ನು ಕನ್ನಡದಲ್ಲಿ ನಡೆಸಲು ಸೂಚಿಸಿರುವುದಾಗಿ" ಅಧಿಸೂಚನೆಯಲ್ಲಿ ಹೇಳಲಾಗಿದೆ.
"ಆದರೆ ಈ ಮೊದಲು ಹೊರಡಿಸಲಾದ ಅಧಿಸೂಚನೆಗಳನ್ನು ಕರ್ನಾಟಕದ ವಿದ್ಯಾರ್ಥಿಗಳೇ ಗಂಭೀರವಾಗಿ ಪರಿಗಣಿಸದೆ ಇದ್ದ ಕಾರಣ, ಈ ಬಾರಿ ಹೊಸ ಅಧಿಸೂಚನೆಯನ್ನು ಜಾರಿಗೊಳಿಸಿ, ಕನ್ನಡೇತರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ" ಎಂದು ತನ್ನ ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂಧಿಗಳಿಗೆ ವಿವಿ ಸೂಚಿಸಿದೆ.
ಇದಕ್ಕೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ವಿಶ್ವವಿದ್ಯಾಲಯ ಕನ್ನಡವನ್ನು ಹೊರತುಪಡಿಸಿ ಬೇರೆಭಾಷೆಗಳಲ್ಲಿ ಒಂದು ವೇಳೆ ವಿದ್ಯಾರ್ಥಿಗಳು, ಅವರ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ವ್ಯವಹರಿಸಿದರೆ ಅವರಿಗೆ ದಂಡ ಕೂಡ ವಿಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈ ಕುರಿತು ಮಾತನಾಡಿರುವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಕೆ. ಆರ್. ವೇಣುಗೋಪಾಲ್, "ಕೇವಲ ಒಂದು ಬಾರಿಗೆ ದಂಡದಿಂದ ವಿನಾಯ್ತಿ ನೀಡುವುದನ್ನು ಪರಿಗಣಿಸಲಾಗುವುದು. ಆದರೆ, ಎರಡನೇ ಬಾರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಇಂಗ್ಲಿಷ್ ನಲ್ಲಿ ವ್ಯವಹರಿಸಿದರೆ, ದಂಡ ವಿಧಿಸಲೇಬೇಕಾದ ಅನಿವಾರ್ಯತೆ" ಇದೆ ಎಂದಿದ್ದಾರೆ. ಇದೇ ವೇಳೆ "ಕರ್ನಾಟಕದಲ್ಲಿ ನಡೆಸಲಾಗುವ ಎಲ್ಲ ಆಡಳಿತ ವ್ಯವಹಾರವನ್ನು ವಿಶ್ವವಿದ್ಯಾಲಯ ಕನ್ನಡದಲ್ಲಿಯೇ ನಡೆಸಲಿದ್ದು, ಯುಜಿಸಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಜೊತೆ ಇಂಗ್ಲಿಷ್ ನಲ್ಲಿಯೇ ವ್ಯವಹಾರ ನಡೆಸಲಾಗುವುದು" ಎಂದು ಉಪಕುಲಪತಿಗಳು ಸ್ಪಷ್ಟಪಡಿಸಿದ್ದಾರೆ.