ಕೊನೆ ಕ್ಷಣದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸುವ ಕಸರತ್ತಿಗೆ ಮುಂದಾದ ಕಾಂಗ್ರೆಸ್, ಜೆಡಿಎಸ್
11 ಶಾಸಕರು ಕರ್ನಾಟಕ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಶನಿವಾರ ತಡರಾತ್ರಿ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ಹಾರಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಬೆಂಗಳೂರು: 11 ಶಾಸಕರು ಕರ್ನಾಟಕ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಶನಿವಾರ ತಡರಾತ್ರಿ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ಹಾರಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಈಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಭಿನ್ನಮತ ಶಮನಗೊಳಿಸಲು ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಹರಿ ಪ್ರಸಾದ್ ಅವರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಈಗ ರಾಜ್ಯದಲ್ಲಿನ ವಿಧ್ಯಮಾನಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ' ನಾನು 5-6 ಶಾಸಕರ ಸಂಪರ್ಕದಲ್ಲಿದ್ದೇನೆ.ಎಲ್ಲವನ್ನು ಬಹಿರಂಗಪಡಿಸಲು ಅಸಾಧ್ಯ. ಪಕ್ಷಕ್ಕೆ ಎಲ್ಲರೂ ಬದ್ದರಾಗಿರಬೇಕೆ ಹೊರತು ಅವರು ನನಗೆ ನಿಷ್ಠರಾಗಿರುವುದಲ್ಲ. ಎಲ್ಲರೂ ಕೂಡ ಪಕ್ಷಕ್ಕೆ ನಿಷ್ಠರಾಗಿರಬೇಕೆನ್ನುವುದನ್ನು ನಾನು ನಿರೀಕ್ಷಿಸುತ್ತೇನೆ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನ ಕರ್ನಾಟಕದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರನ್ನು ಮನವೊಲಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಅವರು ಇನ್ನು ಕೂಡ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಹೇಳಲಾಗಿದೆ.
ಶನಿವಾರದಂದು ಕಾಂಗ್ರೆಸ್ ನ 8 ಹಾಗೂ ಜೆಡಿಎಸ್ 3 ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರು ಅಂತಿಮ ತೀರ್ಮಾನವನ್ನು ಮಂಗಳವಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದೆ ವೇಳೆ ರಾಜೀನಾಮೆ ನೀಡಿರುವ ಶಾಸಕರೆಲ್ಲ ಮುಂಬೈನ ಸೋಫಿತೆಲ್ ಹೋಟೆಲ್ ನಲ್ಲಿ ತಂಗಿದ್ದಾರೆ. ಜುಲೈ 10 ವರೆಗೆ ರೂಂ ಗಳನ್ನು ಬುಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.