ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನತ್ತ ಕಾಂಗ್ರೆಸ್
8 ನೇ ಸುತ್ತಿನ ಅಂತ್ಯದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹಳ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಮೈಸೂರು ರಸ್ತೆ ಹಲಗೆವಡೇರಹಳ್ಳಿಯ ಶ್ರೀ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಸುತ್ತಿನಿಂದಲೂ ಮುನ್ನಡೆ ಸಾಧಿಸಿರುವ ಮುನಿರತ್ನ, ಎಂಟನೇ ಸುತ್ತಿನ ಬಳಿಕ ಸಮೀಪದ ಬಿಜೆಪಿ ಅಭ್ಯರ್ಥಿಗಿಂತ 42,278 ಮತಗಳ ಅಂತರ ಹೊಂದಿದ್ದಾರೆ.
ಎಂಟನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸಿನ ಮುನಿರತ್ನಗೆ 70,224 ಮತಗಳು, ಬಿಜೆಪಿಯ ತುಳಸಿ ಮುನಿರಾಜು ಗೌಡಗೆ 27,946 ಮತಗಳು ಮತ್ತು ಜೆಡಿಎಸ್ ನ ಜಿ.ಎಚ್. ರಾಮಚಂದ್ರ ಅವರಿಗೆ 15,450 ಮತಗಳು ಲಭಿಸಿದೆ. ಇನ್ನು ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ 294 ಮತಗಳನ್ನು ಗಳಿಸಿದ್ದರೆ, 1,182 ನೋಟಾ ಮತಗಳು ದಾಖಲಾಗಿದೆ.
ಮತದಾರರ ಚೀಟಿ ಪತ್ತೆಯಾದ ಹಗರಣ ಹಿನ್ನೆಲೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ಚುನಾವಣೆ ಮೇ 28ಕ್ಕೆ ಮತದಾನ ಮುಂದೂಡಿಕೆಯಾಗಿತ್ತು.
ಕ್ಷೇತ್ರದಲ್ಲಿದ್ದ ಒಟ್ಟು 4,71,900 ಮತದಾರರಲ್ಲಿ ಶೇಕಡಾ 54.20 ರಷ್ಟು ಮಂದಿಯಷ್ಟೇ ಹಕ್ಕು ಚಲಾಯಿಸಿದ್ದರು. ಮತದಾನಕ್ಕಾಗಿ 421 ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು.