ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಪೂರ್ಣ; ರಾಹುಲ್ ನಿವಾಸದಲ್ಲಿ ಚುನಾವಣಾ ಸಮಿತಿ ಸಭೆ ಆರಂಭ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಆರಂಭವಾಗಿದೆ.
ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಾಟ್ಟಿ ಬಿಡುಗಡೆಗೆ ಕೈ ನಾಯಕರ ಕಸರತ್ತು ಮುಂದುವರೆದಿದ್ದು, ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಆರಂಭವಾಗಿದೆ.
ಕಳೆದ ಮೂರು ದಿನಗಳಿಂದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಡೆಯುತ್ತಿದ್ದ ಕಾಂಗ್ರೆಸ್ ವಾರ್ ರೂಂನಲ್ಲಿ ಹಿರಿಯ ನಾಯಕ ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ಕ್ರೀನಿಂಗ್ ಕಮಿಟಿ ಸಭೆ ಇಂದು ಮಧ್ಯಾಹ್ನ ಮುಕ್ತಾಯಗೊಂಡಿದ್ದು, ರಾಹುಲ್ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಆರಂಭವಾಗಿದೆ.
ಕೈ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಅಂತಿಮ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಇಂದೇ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಸಾಧ್ಯತೆ ಇದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿದ್ದು, ಚುನಾವಣಾ ಸಮಿತಿ ಸಭೆ ಆರಂಭವಾಗಿದ್ದು, ಪ್ರತಿ ಕ್ಷೇತದ ಮಾಹಿತಿಯನ್ನು ರಾಹುಲ್ ಗಾಂಧಿ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನಲಾಗಿತ್ತು. ಆದರೆ ಈಗ ಎಲ್ಲ ಕ್ಷೇತ್ರಗಳಿಗೂ ಒಂದೇ ಬಾರಿಗೆ ಅಭ್ಯರ್ಥಿಗಳ ಘೋಷಣೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಚುನಾವಣಾ ಸಮಿತಿ ಸಭೆ ಮುಕ್ತಾಯದ ನಂತರ, ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಿ ಒಪ್ಪಿಗೆ ಪಡೆದು, ಇಂದು ತಡ ರಾತ್ರಿ ಅಥವಾ ನಾಳೆ ಬೆಳಿಗ್ಗೆ ಪಟ್ಟಿ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡುವ ವಿಚಾರದಲ್ಲಿ ನಮ್ಮ ನಾಯಕರ ನಡುವೆ ಯಾವುದೇ ಗೊಂದಲವಿಲ್ಲ. ಗೊಂದಲ ಇರುವುದು ಮಾಧ್ಯಮದವರಿಗೆ ಮಾತ್ರ ಎಂದು ತಿಳಿಸಿದರು. ಇದಕ್ಕೂ ಮುನ್ನ ಇಲ್ಲಿನ ಕರ್ನಾಟಕ ಭವನದಲ್ಲಿರುವ ನಡೆದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು.