ಬೆಂಗಳೂರು: ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಅಪರಾಧ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. 


COMMERCIAL BREAK
SCROLL TO CONTINUE READING

ಕಲಬುರ್ಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಾಗೂ ಬಹಿರಂಗ ಪ್ರಚಾರದ ಸಂದರ್ಭದಲ್ಲಿ "ವೀರೇಂದ್ರ ಪಾಟೀಲರಿಗೆ ಅವಮಾನಿಸಿದ ಕಾಂಗ್ರೆಸ್​​​​ ಪಕ್ಷಕ್ಕೆ ಲಿಂಗಾಯತರು ಮತ ನೀಡಿದರೆ ಅಪರಾಧ ಮಾಡಿದಂತೆ" ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು


ಈ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯ ಕಾಂಗ್ರೆಸ್​ ಪದಾಧಿಕಾರಿಗಳಾದ ಕೆಪಿಸಿಸಿ ಕಾರ್ಯದರ್ಶಿ ಎ.ಎನ್.ನಟರಾಜ್​ಗೌಡ, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅದ್ದೆ, ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರರಾವ್ ಅವರು ಬುಧವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.


ಬಿ.ಎಸ್‌ ಯಡಿಯೂರಪ್ಪ ಅವರ ಹೇಳಿಕೆ ಲಿಂಗಾಯತ ಸಮುದಾಯವನ್ನು ಪ್ರಚೋದಿಸುವಂತಿದೆ. ತಮ್ಮ ಸ್ಥಾನದ ಘನತೆಯನ್ನು ಮರೆತು ಜಾತಿಯಾಧಾರಿತವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಹೇಳಿಕೆಯನ್ನು ನೀಡಿರುವ ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ.