ಬೆಂಗಳೂರು :  ಇಡೀ ದೇಶದಲ್ಲಿ ಜಾತಿ ಗಣತಿಗೆ ಕಾಂಗ್ರೆಸ್ ಬದ್ದವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು. 


COMMERCIAL BREAK
SCROLL TO CONTINUE READING

ಜಾತಿ ಗಣತಿ ಆರಂಭಿಸಿದ್ದೇ ನಾನು:


ಪ್ರತಿಯೊಂದು ಜಾತಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯುವುದಕ್ಕೆ ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸುವುದಕ್ಕಾಗಿ ನಾನೇ ಜಾತಿಗಣತಿ ಆರಂಭಿಸಿದೆ ಎಂದು ವಿವರಿಸಿದರು. 


ಅಂಬೇಡ್ಕರ್ ಅವರು ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಜಾತಿ ಗಣತಿಗೆ ಕಾಂಗ್ರೆಸ್ ಬದ್ದವಾಗಿದೆ. ಇಡೀ ದೇಶದಲ್ಲಿ ಜಾರಿ ಮಾಡಲು ಕಾಂಗ್ರೆಸ್ ಬದ್ದವಾಗಿದೆ ಎಂದರು. 


ಕನಕದಾಸರು ಆಕಸ್ಮಿಕವಾಗಿ ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.ದಾಸಪಂಥಕ್ಕೆ ಪ್ರವೇಶಿಸುವ ಮೊದಲು ಕನಕರು ಪಾಳೇಗಾರರಾಗಿದ್ದರು. ಆದಿಕೇಶವನ ಭಕ್ತರಾಗಿ ದಾಸರಾಗಿ, ದಾಸಶ್ರೇಷ್ಠರೂ ಆದರು. ಆದರೆ ಕನಕದಾಸರ ಕೀರ್ತನೆಗಳಲ್ಲಿ ಅತ್ಯುನ್ನತ ಮಾನವೀಯ ಮೌಲ್ಯಗಳಿವೆ ಎಂದು ವಿವರಿಸಿದರು.


ಇದನ್ನೂ ಓದಿ: ಕಾಂತರಾಜು ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧ: ಸಚಿವ ಶಿವರಾಜ್ ತಂಗಡಗಿ


ನಾನು ಕುರುಬನಾಗಿ ಜನಿಸಿದ್ದೇನೆ. ನೀವುಗಳೂ ಕುರುಬ ಸಮುದಾಯದಲ್ಲಿ ಜನಿಸಿರಬಹುದು. ಹಾಗಂದ ಮಾತ್ರಕ್ಕೆ ಕುರುಬರಾಗೇ ಸಾಯಬೇಕಾ? ಅಪ್ಪಟ ಮನುಷ್ಯರಾಗಿ ಸಾಯಬೇಕು ಅಲ್ವಾ ಎಂದರು.ಕನಕದಾಸರನ್ನು ಶೂದ್ರ ಜಾತಿಯವ ಎನ್ನುವ ಕಾರಣಕ್ಕೆ ಕೃಷ್ಣನ ದರ್ಶನಕ್ಕೆ ಬಿಡಲಿಲ್ಲ. ಕುವೆಂಪು ಅವರು ಹೇಳಿದಂತೆ ನಾವೆಲ್ಲಾ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ವಿಶ್ವ ಮಾನವರಾಗುವ ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ನಾವೆಲ್ಲಾ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.  


ಕನಕದಾಸರ 500 ನೇ ಜಯಂತಿಯನ್ನು ಮಾಡಿದ್ದು ನಾನೇ. ಅಲ್ಲಿಯವರೆಗೂ 400 ನೇ ಜಯಂತಿಯನ್ನು ಯಾರೂ ಆಚರಿಸಿರಲಿಲ್ಲ. 


ಸುಖಾ ಸುಮ್ಮನೆ ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ. ನಿಮ್ಮಲ್ಲೊಂದು ತತ್ವ ಇರಲಿ. ಮೂರು ವರ್ಷಗಳಿಂದ ಕನಕಶ್ರೀ ಪ್ರಶಸ್ತಿಯನ್ನೇ ಕೊಟ್ಟಿಲ್ಲ. ಆದರೂ ಅವರಿಗೂ ಚಪ್ಪಾಳೆ ತಟ್ಟೋದು, ಇಲ್ಲಿ ಬಂದು ನನಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ನಿಮಗೆ ಸ್ಪಷ್ಟತೆ ಇರಲಿ. ಕನಕದಾಸರು ಒಂದು ಜಾತಿಗೆ ಸೇರಿದವರಲ್ಲ. ಕುರುಬ ಜಾತಿಯವರನ್ನು ಮೆಚ್ಚಿಸಲು ಕನಕ ಜಯಂತಿ ಮಾಡುತ್ತಿಲ್ಲ. ಕನಕದಾಸರು ವಿಶ್ವ ಮಾನವರಾಗಿದ್ದರು. ಅವರ ತತ್ವಾದರ್ಶಗಳನ್ನು ಪಾಲಿಸಿ ವಿಶ್ವ ಮಾನವರಾಗೋಣ ಎಂದು ಆಶಿಸಿದರು. 


ಕನಕದಾಸರ ಕುರಿತ ಸಾಹಿತ್ಯ ಕೃಷಿ ಮಾಡದಿದ್ದರೂ ಕನಕದಾಸರ ತತ್ವಾದರ್ಶಗಳನ್ನು ಪಾಲಿಸುತ್ತಾ, ಜನ ಸೇವಕರಾಗಿದ್ದ ಲಿಂಗಪ್ಪ ಅವರನ್ನು ಕನಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತ ಎಂದು ಮೆಚ್ಚುಗೆ ಸೂಚಿಸಿ ಲಿಂಗಪ್ಪ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು. 


ತಿಂಥಣಿಯ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್. ಎಂ. ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.