ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ- ಮೈಸೂರಿನಲ್ಲಿ ಅಮಿತ್ ಷಾ ಹೇಳಿಕೆ
ಈಗಾಗಲೇ ಇಪ್ಪತ್ತೊಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದರೆ ಹಿಂಸೆ, ಭ್ರಷ್ಟಾಚಾರದ ಸರ್ಕಾರ ಎಂದೇ ಹೆಸರಾಗಿದೆ. ಹಾಗಾಗಿ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರತಿಸ್ಪರ್ಧಿಯಲ್ಲ ಎಂದು ಅಮಿತ್ ಷಾ ಹೇಳಿದರು.
ಮೈಸೂರು: ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಇಪ್ಪತ್ತೊಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದರೆ ಹಿಂಸೆ, ಭ್ರಷ್ಟಾಚಾರದ ಸರ್ಕಾರ ಎಂದೇ ಹೆಸರಾಗಿದೆ. ಹಾಗಾಗಿ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರತಿಸ್ಪರ್ಧಿಯಲ್ಲ. ಜೆಡಿಎಸ್ನ ಒಂದಷ್ಟು ಶಾಸಕರು ಗೆಲ್ಲಬಹುದು ಅಷ್ಟೆ. ಆದರೆ, ಸಿದ್ದರಾಮಯ್ಯ ಸರ್ಕಾರವನ್ನು ಓಡಿಸುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ ಎಂದು ಅಮಿತ್ ಷಾ ಶುಕ್ರವಾರ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಬದಲಾವಣೆ ತರಲು ನಾವು ಬಯಸುತ್ತೇವೆ. ಇಲ್ಲಿ ಬದಲಾವಣೆ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಲ್ಲ. ಅದಂತೆ ಅಧಿಕಾರದಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶವಲ್ಲ, ಇಡೀ ಕರ್ನಾಟಕದ ಮಹಿಳೆಯರಿಗೆ, ನೇಕಾರರಿಗೆ, ಯುವಕರಿಗೆ, ಬಡವರು, ದಲಿತರ ಬದುಕನ್ನು ಬದಲಾಯಿಸಲು ಪರಿವರ್ತನೆಗಾಗಿ ಹೊರಾಡುತ್ತಿದ್ದೇವೆ ಎಂದರು.
ಚಿತ್ರದುರ್ಗದಲ್ಲಿ ಮಾತಾಡುವಾಗ ನನ್ನ ಬಾಯಿಂದ ತಪ್ಪಾಗಿ "ಬಿ.ಎಸ್.ಯಡಿಯೂರಪ್ಪ ಸರ್ಕಾರ ಭ್ರಷ್ಟ ಸರ್ಕಾರ" ಎಂಬ ಮಾತು ಬಂದಿತ್ತು. ಇದನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಸಂಭ್ರಮಿಸಿದ್ದರು, ಟೀಕಿಸಿದ್ದರು. ಕೆಲವೊಮ್ಮೆ ನನ್ನ ಬಾಯಿಯಿಂದ ತಪ್ಪು ಮಾತು ಬರಬಹುದು. ಆದರೆ ಕರ್ನಾಟಕದ ಜನ ತಪ್ಪು ನಿರ್ಣಯ ಮಾಡುವುದಿಲ್ಲ.
ಮುಂದುವರೆದು ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನೀವು ಎಂಥಹ ರಾಜಕಾರಣ ಮಾಡುತ್ತಿದ್ದೀರಿ? ನೀವು ಜಯಂತಿ ಆಚರಣೆ ಮಾಡುವುದೇ ಇದ್ದಲ್ಲಿ, ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಆಚರಿಸಿ, ನವಕರ್ನಾಟಕ ನಿರ್ಮಾತೃ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜಯಂತಿ ಆಚರಿಸಿ. ಆದರೆ ಟಿಪ್ಪು ಸುಲ್ತಾನ್ ಬಿಟ್ಟರೆ ನಿಮಗೆ ಬೇರೆ ಯಾರೂ ಕಾಣಿಸೋದಿಲ್ಲವೇ? ಎಂದು ಅಮಿತ್ ಷಾ ಪ್ರಶ್ನಿಸಿದರು.
ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ದೇಶದ ತುಂಬೆಲ್ಲ ಬಿಜೆಪಿ ಸರ್ಕಾರ ಇದೆ. ಹಾಗೇ ಕರ್ನಾಟಕದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಸರ್ಕಾರ ಕಟಿಬದ್ಧವಾಗಿ ದುಡಿಯುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಶ್ರಮಿಸುತ್ತಿರುವುದು ಮೋದಿ ನೇತೃತ್ವದ ಮೋದಿ ಸರ್ಕಾರ. ಹಾಗಾಗಿ ಕರ್ನಾಟಕದಲ್ಲೂ ಸರ್ಕಾರ ಬದಲಾಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಏರುದನಿಯಲ್ಲಿ ಅಮಿತ್ ಷಾ ಹೇಳಿದರು.
ಬಿಜೆಪಿಗೆ ಸೇರ್ಪಡೆಗೊಂಡ ಸಂದೇಶ್ ಸ್ವಾಮಿ, ಮಹಾದೇವಪ್ಪ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಸಂದೇಶ್ ನಾಗರಾಜು ಸಹೋದರ ಸಂದೇಶ್ ಸ್ವಾಮಿ, ಪುತ್ರ ಸಂದೇಶ್, ಮಹಾನಗರ ಪಾಲಿಕೆ ಸದಸ್ಯ ಮಹದೇವಪ್ಪ ಸೇರಿದಂತೆ ಪ್ರಮುಖರು ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಶಾಸಕ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಉಪಸ್ಥಿತರಿದ್ದರು.