ಕಾಂಗ್ರೆಸ್ ನವರು ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತಿದ್ದಾರೆ – ಸಿಎಂ ಬೊಮ್ಮಾಯಿ
ಶಿಗ್ಗಾಂವಿ, ಮೇ 08: ಕಾಂಗ್ರೆಸ್ ಅವರು ಸ್ವಾರ್ಥ ಸಾಧನೆಗಾಗಿ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ದ್ವೇಷ ಮತ್ತು ಅರಾಜಕತೆ ಹುಟ್ಟಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ, ಮೇ 08: ಕಾಂಗ್ರೆಸ್ ಅವರು ಸ್ವಾರ್ಥ ಸಾಧನೆಗಾಗಿ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ದ್ವೇಷ ಮತ್ತು ಅರಾಜಕತೆ ಹುಟ್ಟಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಸವಣೂರು ವಿಧಾನಸಭಾ ಕ್ಷೇತ್ರದ ಜೇಕಿನಕಟ್ಟಿ ಹಾಗೂ ಮಂತ್ರೋಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡುತ್ತಾ ಮಾತನಾಡಿದರು.
ನನ್ನ ಕ್ಷೇತ್ರದ ಎಲ್ಲಾ ಗ್ರಾಮಗಳೊಂದಿಗೆ ನನಗೆ ಬಾಲ್ಯದಿಂದಲೂ ನಂಟಿದೆ. ನಾನು ಚುನಾವಣೆಯಲ್ಲಿ ನಿಂತಿದ್ದೀನಿ ಎನ್ನುವುದಕ್ಕಿಂತ ಜನರೇ ಈ ಬಾರಿ ಚುನಾವಣೆ ಮಾಡುತ್ತಿದ್ದಾರೆ. ಎಲ್ಲ ಕಡೆ ಉತ್ಸಾಹ ಇಮ್ಮಡಿಯಾಗಿದೆ. ಚುನಾವಣೆಯಲ್ಲಿ ಹಬ್ಬದ ವಾತಾವರಣ ಮೂಡಿದೆ. ಈ ಬಾರಿಯ ಚುನಾವಣೆ ನಾವು ಮಾಡಿದ ಅಭಿವೃದ್ಧಿ ಹಾಗೂ ಕಾಂಗ್ರೆಸ್ ನ ಒಡೆದು ಆಳುವ ನೀತಿಯ ನಡುವೆ ನಡೆಯುತ್ತಿದೆ. ಕಾಂಗ್ರೆಸ್- ಜೆಡಿಎಸ್ ಅಧಿಕಾರಕ್ಕಾಗಿ ಅನೈತಿಕವಾಗಿ 1 ವರ್ಷ ಸಮ್ಮಿಶ್ರ ಸರ್ಕಾರ ಮಾಡಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ನಂತರ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ಕೊವಿಡ್ ಬಂತು. ಇದಕ್ಕೆ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿದರು. ಇದರಿಂದ ಕರ್ನಾಟಕ ಕೋವಿಡ್ ಮುಕ್ತವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು..
ಡಬಲ್ ಎಂಜಿನ್ ಸರ್ಕಾರಕ್ಕೆ ಬೆಂಬಲ ನೀಡಿ
ಡಬಲ್ ಎಂಜಿನ್ ಸರ್ಕಾರದಿಂದ ಹಲವಾರು ಕೆಲಸಗಳು ಆಗಿದೆ. ಪ್ರಮುಖವಾಗಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಕೊಟ್ಟಿದೆ. ಮುಂಗಾರು ಪ್ರಾರಂಭಕ್ಕೆ ನಾನು ರಾಜ್ಯದ 47 ಲಕ್ಷ ರೈತರಿಗೆ ಬೀಜ ಗೊಬ್ಬರ ಖರೀದಿಗೆ 10 ಸಾವಿರ ರೂ ಕೊಡುವ ಯೋಜನೆ ಕೊಟ್ಟಿದ್ದೇನೆ. ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಲು ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೀನಿ. ಯಶಸ್ವಿನಿ ಯೋಜನೆ ವಾಪಸ್ ತಂದಿದ್ದೀವಿ. ರೈತರಿಗೆ ವೈಯಕ್ತಿಕ ಜೀವ ವಿಮಾ ಯೋಜನೆ ಮಾಡಿದ್ದೀವಿ. ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ ಕೊಡುವ ಯೋಜನೆ. ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದೇವೆ. 16 ಲಕ್ಷ ರೈತರಿಗೆ ಬೆಳೆ ಪರಿಹಾರ ಎರಡು ಪಟ್ಟು ನೀಡಿದ್ದೇವೆ. ಇದೆಲ್ಲಾ ನಿಮ್ಮ ಬಸವರಾಜ ಬೊಮ್ಮಾಯಿ ಮಾಡಿರುವುದು. ಜಲ ಜೀವನ್ ಮಿಷನ್ ನಲ್ಲಿ ಪ್ರತಿ ಗ್ರಾಮದ ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಕೊಡುವ ಯೋಜನೆ ಡಬಲ್ ಎಂಜಿನ್ ಸರ್ಕಾರ ಮಾಡಿದೆ. ನನ್ನ ಕ್ಷೇತ್ರದ 136 ಗ್ರಾಮಗಳಿಗೆ 438 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರು ತರಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿಯಲ್ಲಿ ಅಭಿವೃದ್ಧಿಯ ಪರ್ವ ಆಗಿದೆ
ಶಿಗ್ಗಾಂವಿಯಲ್ಲಿ ಐಟಿಐ ಕಾಲೇಜು, ಸವಣೂರಿನಲ್ಲಿ ಬಿಎಎಂಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತಿದ್ದೇವೆ. 250 ಬೆಡ್ಡಿನ ಹೈಟೆಕ್ ಆಸ್ಪತ್ರೆ, 100 ಬೆಡ್ಡಿನ ತಾಯಿ ಮಗುವಿನ ಆಸ್ಪತ್ರೆ ಮಾಡುತ್ತಿದ್ದೇವೆ. ಶಿಗ್ಗಾಂವಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೇವೆ. ಇದರಿಂದ 10 ಸಾವಿರ ಉದ್ಯೋಗ ಸೃಷ್ಟಿ ಆಗುತ್ತಿದೆ. ಇಲ್ಲಿನ ಮಹಿಳೆಯರು ದುಡಿಯಲು ಅವಕಾಶ ಸಿಗುತ್ತದೆ. ಸವಣೂರಲ್ಲೂ ಒಂದು ಟೆಕ್ಸ್ ಟೈಲ್ ಪಾರ್ಕ್ ಪ್ರಾರಂಭ ಮಾಡಲು ಚಿಂತನೆ ಇದೆ. ಇದರಿಂದ ಅವರ ಮನೆಯ ಆದಾಯ ಹೆಚ್ಚಳವಾಗಿ ಸಮಾಜದಲ್ಲಿಅವರ ಗೌರವ ಹೆಚ್ಚುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದ್ದಾರೆ
ಕಾಂಗ್ರೆಸ್ ನವರು ಈಗ ಗ್ಯಾರಂಟಿ ಕೊಡುವ ಮಾತನಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಅದನ್ನು 2013 ರಲ್ಲಿ ನಮ್ಮ ಸರ್ಕಾರವೇ ಕೊಡುತ್ತಿತ್ತು. 30 ರೂ ಅಕ್ಕಿ ಮೋದಿದು, 3 ರೂ ಚೀಲ ಸಿದ್ದರಾಮಯ್ಯದು. ಕಾಂಗ್ರೆಸ್ ನಾಯಕರು ಅವರ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಅನ್ನುವ ಬದಲು ತನ್ನನ್ನ ಮುಖ್ಯಮಂತ್ರಿ ಮಾಡಿ, ನನಗೊಂದು ಅವಕಾಶ ಕೊಡಿ ಅಂತ ಇಬ್ಬರೂ ಕಿತ್ತಾಡುತ್ತಿದ್ದಾರೆ. ನಾನು ಈ ಹಿಂದೆ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿದಾಗ ಪೊಲೀಸರ ಲಾಠಿ ಕಣ್ಣಿಗೆ ಬಡಿದಿದ್ದನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದಾರೆ. ನಮ್ಮ ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಹೇಳಿದ್ದಾರೆ ಅಂತ ಸುಳ್ಳು ಸುದ್ದಿ ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಎಲ್ಲಿಯೂ ಮಾತನಾಡಿಯೇ ಇಲ್ಲ. ಹಳೆಯ ಕಾರ್ಯಕ್ರಮದ ಫೋಟೊ ಜೋಡಿಸಿದ್ದಾರೆ. ಮೊನ್ನೆ ಪತ್ರಿಕೆಗಳಿಗೆ ಭ್ರಷ್ಟಾಚಾರದ ಲಿಸ್ಟ್ ಕೊಟ್ರು. ಯಾವುದೇ ದೂರು ದಾಖಲಾಗದಿದ್ದರೂ ಅವರು ನಮ್ಮ ಮೇಲೆ ಆರೋಪ ಮಾಡಿದರು. ಎಲೆಕ್ಷನ್ ಕಮಿಷನ್ ನೊಟೀಸ್ ಕೊಟ್ಟರೂ ಅದಕ್ಕೆ ಉತ್ತರ ಕೊಡಲಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ
ಅಭಿವೃದ್ಧಿ ನಿರಂತರವಾಗಿ ನಡೆಯಬೇಕು. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಅವರ ಭ್ರಷ್ಟಾಚಾರ ಮೇಲಿನಿಂದ ಹಿಡಿದು ಹಳ್ಳಿಗಳವರೆಗೂ ಇರುತ್ತದೆ. ನಮ್ಮ ಸರ್ಕಾರ ಬಂದರೆ ಜನ ಕಲ್ಯಾಣ ಸರ್ಕಾರ ಬರುತ್ತದೆ. ಎಲ್ಲ ಕಡೆ ಬಿಜೆಪಿ ಅಲೆ ಇದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಶತಸಿದ್ದ. ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲೂ ದಾಖಲೆ ಮತಗಳಿಂದ ಜನ ನನ್ನನ್ನು ಆಯ್ಕೆ ಮಾಡುವ ವಿಶ್ವಾಸ ಇದೆ. ನಿಮ್ಮೆಲ್ಲರ ಆಶೀರ್ವಾದ ಕೋರುತ್ತಿದ್ದೇನೆ. ಇದು ಶಿಗ್ಗಾಂವಿ ಸವಣೂರಿನ ಶಾಸಕನ ಆಯ್ಕೆಗಲ್ಲ. ಇಡೀ ರಾಜ್ಯದಲ್ಲಿ ಜನಪರ, ಜನಕಲ್ಯಾಣ ಸರ್ಕಾರ ತರಲು ನಿಮ್ಮ ಆಶೀರ್ವಾದ ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.