ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಇಂದಿಗೆ ನೂರು ದಿನ ಪೂರೈಸಿದೆ. ಅತಂತ್ರ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿದ ದೋಸ್ತಿ ಸರ್ಕಾರಕ್ಕೆ ಇಂದಿಗೆ ನೂರು ದಿನದ ಸಂಭ್ರಮ. 


COMMERCIAL BREAK
SCROLL TO CONTINUE READING

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಹಾಗೂ ರಾಷ್ಟ್ರಮಟ್ಟದಲ್ಲೂ ಎನ್​ಡಿಎಯೇತರ ವೇದಿಕೆ ನಿರ್ವಿುಸುವ ಮಹತ್ವಾಕಾಂಕ್ಷೆ ಯೊಂದಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಸರಣಿ ಸಂಕಷ್ಟಗಳ ನಡುವೆಯೂ ಶತದಿನವನ್ನು ಪೂರೈಸಿದೆ. 


ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಜನಸೇವೆಯ ಉದ್ದೇಶದಿಂದ  'ಸಾಂದರ್ಭಿಕ ಶಿಶು'ವಾಗಿ ರಾಜ್ಯದ ಅಧಿಕಾರ ಗದ್ದುಗೆ ಹಿಡಿದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಈ 100 ದಿನಗಳ ಅವಧಿಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಾಗಿವೆ. ಅನ್ನಭಾಗ್ಯದ ಅಕ್ಕಿಯಲ್ಲಿ ಕಡಿತ, ರಾಮನಗರ, ಮಂಡ್ಯಕ್ಕೆ ಮಾತ್ರ ಸಿಎಂ ಎಂಬ ಟೀಕೆ, ಉತ್ತರ ಕರ್ನಾಟಕ ಮಲತಾಯಿ ಧೋರಣೆಯಂತಹ ವಿವಾದಗಳು ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿವೆ. ದೋಸ್ತಿ ಸರ್ಕಾರದಲ್ಲಿ ಯಾವುದೇ ಮುನಿಸಿಲ್ಲ ಎಂದು ಎರಡೂ ಪಡೆಯ ನಾಯಕರು ಹೇಳುತ್ತಿದ್ದರೂ ಸಹ ಒಕ್ಕೊರಲ ಒಮ್ಮತ ಇಲ್ಲವೆಂಬ ಅನುಮಾನಗಳೂ ಕೆಲವೊಮ್ಮೆ ಮೂಡುತ್ತಿವೆ. ಇದರ ನಡುವೆ ಸರ್ಕಾರ ಉರುಳಿಸಲು ವಿರೋಧಿ ಶಕ್ತಿಗಳು ಹವಣಿಸುತ್ತಿವೆ.


ದೋಸ್ತಿ ಸರ್ಕಾರದ ಶತಕದ ಸಾಧನೆ:
* ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 40 ಸಾವಿರ ಕೋಟಿಗೂ ಹೆಚ್ಚಿನ ಸಾಲ ಮನ್ನ ಮಾಡಿರುವುದು ಕುಮಾರಸ್ವಾಮಿ ಸರ್ಕಾರದ ಐತಿಹಾಸಿಕ ಸಾಧನೆ ಯಾಗಿದೆ. ಇದರ ಜೊತೆಗೆ ರೈತರಿಗೆ ಆತ್ಮ ಸ್ಥೈರ್ಯ ತುಂಬಲು ರೈತರ ಜೊತೆ ಗದ್ದೆಗೆ ಇಳಿದು ನಾಟಿ ಮಾಡಿದ್ದು ಸರ್ಕಾರದ ಮಾದರಿ ನಡೆಯಾಗಿದೆ.


ಪ್ರವಾಹಕ್ಕೆ ತತ್ತರಿಸಿದ ಕೊಡಗನ್ನು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯಾಚರಣೆ


* ಇಸ್ರೇಲ್‌ ಮಾದರಿ ಕೃಷಿಗಾಗಿ 150 ಕೋಟಿ ರೂ. ಮೀಸಲು.  ಕೋಲಾರ, ಗದಗ, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕ ಜಾರಿ.
* ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ.
* ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ ಮೀಸಲು.


ದೋಸ್ತಿ ಸರ್ಕಾರದ ಎಡವಟ್ಟು:
* ಸರ್ಕಾರದಲ್ಲಿ ಸಮನ್ವಯದ ಕೊರತೆ.
* ಮೈತ್ರಿ ಸರ್ಕಾರ ಬಂದ ಬಳಿಕ ಹೆಚ್ಚಾದ ಅಧಿಕಾರಿಗಳ ವರ್ಗಾವಣೆ ದಂಧೆ ಬಗ್ಗೆ ವಿರೋಧ ಪಕ್ಷದ ಆರೋಪ.
* ಅನ್ನಭಾಗ್ಯ ಫಲಾನುಭವಿಗಳಿಗೆ ಕೊಡುವ ಅಕ್ಕಿ 5 ಕೆಜಿಯೋ, 7 ಕೇಜಿಯೋ ಎಂಬ ಗೊಂದಲ.
* ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಕಲ್ಪಿಸುವ ವಿಚಾರದಲ್ಲೂ ಸ್ಪಷ್ಟತೆ ಇಲ್ಲದಿರುವುದು.


ಕಳೆದ 100 ದಿನದಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದೇನೆ. ಶೇ.80 ಅಧಿಕಾರಿಗಳು ನನ್ನ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹಳೆಯ ಪದ್ಧತಿಯಿಂದ ಹೊರಬಂದು ಇಂದಿನ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ನಾನು ಅಂದುಕೊಂಡಿರುವ ಕಾರ್ಯಕ್ರಮಗಳನ್ನು ಸೆಪ್ಟಂಬರ್ ನಿಂದ ಜಾರಿಗೊಳಿಸಲಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.


ರಾಜ್ಯ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.