ಬೆಂಗಳೂರು: ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದ ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಶುಕ್ರವಾರ ರಾಮಮೂರ್ತಿ ನಗರ ಪೊಲೀಸರಿಗೆ ಶರಣಾಗಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ಫೆ.16ರಂದು ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಹೊರಮಾವು ಬಿಬಿಎಂಪಿ ಕಂದಾಯ ಕಚೇರಿಗೆ ನುಗ್ಗಿ, ಜಮೀನು ಖಾತೆ ಮಾಡಿಕೊಡದಿದ್ದರೆ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ನಂತರ ಫೆ.20ರಂದು ಈ ಘಟನೆ ಬೆಳಕಿಗೆ ಬಂದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 


ಇದನ್ನೂ ಓದಿ : ವೀಡಿಯೋ : 'ಬಿಬಿಎಂಪಿ ಕಚೇರಿಗೇ ಬೆಂಕಿ ಹಚ್ತೇನೆ' ಎಂದ ಕಾಂಗ್ರೆಸ್ ಮುಖಂಡ!


ಆದರೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದ ನಾರಾಯಣ ಸ್ವಾಮಿ ಅವರ ಬಂಧನಕ್ಕಾಗಿ ರಾಮಮೂರ್ತಿ ನಗರ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದರು ಎನ್ನಲಾಗಿದೆ. ಆದರೆ, ನಾಪತ್ತೆಯಾಗಿದ್ದ ನಾರಾಯಣ ಸ್ವಾಮಿ, ಇಂದು ಬೆಳಿಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.


ಇದಕ್ಕೂ ಮುನ್ನ, ನಾರಾಯಣಸ್ವಾಮಿ ಗುಂಡಾಗಿರಿ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು, ನಾರಾಯಣ ಸ್ವಾಮಿಯನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆದೇಶಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.