ಎಂ.ಬಿ.ಪಾಟೀಲ್ ಮನವೊಲಿಸಲು ಪತ್ನಿ ಭೇಟಿ ಮಾಡಿದ `ಕೈ` ನಾಯಕರು!
ಎಂ.ಬಿ.ಪಾಟೀಲ್ ಮನೆಗೆ ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, ಆಶಾ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು: ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ್ ಮನವೊಲಿಸಲು ಕಾಂಗ್ರೆಸ್ ಪ್ರಯತ್ನ ಮುಂದುವರೆದಿದೆ. ಈ ಸಂಬಂಧ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದ್ದು, ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಮೂಲಕ ಎಂ.ಬಿ.ಪಾಟೀಲ್ ಮನವೊಲಿಸಲು ಪ್ರಯತ್ನ ನಡೆಸಿದೆ.
ಈ ಸಂಬಂಧ ಇಂದು ಸದಾಶಿವ ನಗರದಲ್ಲಿರುವ ಎಂ.ಬಿ.ಪಾಟೀಲ್ ಮನೆಗೆ ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಅವರು, ಆಶಾ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. "ಮೊದಲ ಬಾರಿ ಸಚಿವ ಸ್ಥಾನ ಕೈತಪ್ಪಿರಬಹುದು. ಆದರೆ ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗಲಿದೆ. ಅಲ್ಲಿಯವರೆಗೆ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತಿರಲು ಹೇಳಿ" ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, "ಕಾಂಗ್ರೆಸ್ ಪಕ್ಷದಲ್ಲಿ ಎಂ.ಬಿ.ಪಾಟೀಲ್ ಪ್ರಭಾವಿ ನಾಯಕರು. ಕಳೆದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇದುವರೆಗೂ ಭಿನ್ನಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಸದ್ಯದಲ್ಲೇ ಎಲ್ಲವೂ ತಹಬದಿಗೆ ಬರಲಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕರಾಗಿರುವ ಎಂ.ಬಿ.ಪಾಟೀಲ್ ಅವರು, ಕಳೆದ ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರು. ಆದರೆ ಈ ಬಾರಿ ಅವರಿಗೆ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಎಂ.ಬಿ.ಪಾಟೀಲ್ ಅವರು ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಿ ಭಿನ್ನಮತ ಸ್ಫೋಟಿಸಿದ್ದರು. ಇದಕ್ಕೆ ಎರಡನೇ ಹಂತದಲ್ಲಿ ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೇಳಿದರೂ, ಅದಕ್ಕೆ ಮಣಿಯದ ಪಾಟೀಲ್ ಅವರು ಕೊಟ್ಟರೆ ಅಪ್ ಮುಖ್ಯಮಂತ್ರಿ ಹುದ್ದೆ ಕೊಡಿ, ಎರಡನೇ ಹಂತದ ಸಚಿವ ಸ್ಥಾನ ಬೇಡ ಎಂದು ಪಟ್ಟು ಹಿಡಿದಿದ್ದರು. ಆದರೆ, ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿ ಸಾಧ್ಯವಿಲ್ಲ, ಪ್ರಬಲ ಸಚಿವ ಸ್ಥಾನ ನೀಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಖಡಕ್ ಆಗಿ ಹೇಳಿದ್ದರು.