ಬೆಂಗಳೂರು: ಆಪರೇಶನ್ ಕಮಲದ ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಪಕ್ಷದೊಳಗಿನ ಭಿನ್ನಮತ ಕಾಂಗ್ರೆಸ್ ಪಕ್ಷವನ್ನು ಎಡಬಿಡದಂತೆ ಕಾಡುತ್ತಿದೆ. ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಮತ ಶಮನಕ್ಕೆ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಾಂಗ್ರೆಸ್ ನಾಯಕರು ದೆಹಲಿಯತ್ತ ದೌಡಾಯಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದೆಹಲಿಗೆ ದೌಡಾಯಿಸಲಿದ್ದು ರಾಜ್ಯ ರಾಜಕೀಯದಲ್ಲಿನ ಪ್ರಸಕ್ತ ವಿಧ್ಯಮಾನಗಳ ಬಗ್ಗೆ ರಾಹುಲ್ ಗೆ ಮಾಹಿತಿ ನೀಡಲಿದ್ದಾರೆ.


ಅಲ್ಲದೆ ಅತೃಪ್ತ ಶಾಸಕರ ವಿಚಾರ, ಬಿಜೆಪಿ ಆಮಿಷ, ಜಾರಕಿಹೊಳಿ ಬ್ರದರ್ಸ್ ಬಂಡಾಯ ಹಾಗೂ ಪರಿಷತ್ ಚುನಾವಣೆ, ಸಂಪುಟ ವಿಸ್ತರಣೆ ದಿನಾಂಕ ನಿಗದಿ, ನಿಗಮ ನೇಮಕ ಸೇರಿ ಇತರೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.


ಸತೀಶ್ ಜಾರಕಿಹೊಳಿಗೆ ರಾಹುಲ್ ಬುಲಾವ್:
ಕೆಲವು ಅತೃಪ್ತ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಹೋಗದಂತೆ ನಿನ್ನೆ ನಾಯಕರು ಬೆಂಗಳೂರು ಮತ್ತು ದೆಹಲಿಯಲ್ಲಿ ತೀವ್ರ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರಕ್ಕೆ ತಲೆನೋವಾಗಿರುವ ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿಗೆ ದೆಹಲಿಗೆ ಬರುವಂತೆ ನಿನ್ನೆ ರಾಹುಲ್ ಗಾಂಧಿಯವರಿಂದ ಬುಲಾವ್ ಬಂದಿದೆ. ಇದೀಗ ಎಲ್ಲ ಕಾಂಗ್ರೆಸ್ ನಾಯಕರ ದೃಷ್ಟಿ ಜಾರಕಿಹೊಳಿ ಬ್ರದರ್ಸ್ ಮೇಲೆ ನೆಟ್ಟಿದೆ.


ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಪಟ್ಟವೇ ಬೇಕಂತೆ!


ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಪಟ್ಟ:
ತಮ್ಮ ಆಪ್ತರೊಂದಿಗೆ ಬಿಜೆಪಿಗೆ ಬಂದರೆ ಡಿಸಿಎಂ ಹುದ್ದೆ ನೀಡೋದಾಗಿ ರಮೇಶ್ ಜಾರಕಿಹೊಳಿಗೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಜೊತೆ ಮಾತುಕತೆ ವೇಳೆ ಬಾಯ್ಬಿಟ್ಟಿರುವ ರಮೇಶ್ ಜಾರಕಿಹೊಳಿ ಬಿಜೆಪಿ ಜೊತೆ ಕೈ ಜೋಡಿಸಿದರೆ 'ವಾಲ್ಮಿಕಿ ಸಮುದಾಯ'ಕ್ಕೆ ಡಿಸಿಎಂ ಸ್ಥಾನ ಸಿಗುತ್ತೆ. ಅಹಿಂದ ಪರವಾಗಿರೋ ನೀವು ನಮಗೆ ಬೆಂಬಲ ನೀಡಿ ಅಥವಾ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನನ್ನನ್ನು ಡಿಸಿಎಂ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.


ಏತನ್ಮಧ್ಯೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಶಾಸಕರಿಗಿಂತ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತಿನಂತೆ ನಡೆಸುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರ ಮೂಲಕವೇ ಅದನ್ನು ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಹಿಡಿತ ಬಿಗಿಗೊಳಿಸುವ ಯತ್ನ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.