ಆಪರೇಶನ್ ಕಮಲಕ್ಕೆ ಬೆಚ್ಚಿ ಬಿದ್ದಿದೆ `ಕೈ` ಪಾಳಯ
ಯಾರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನೋ ಗೊಂದಲದಲ್ಲಿ ಕಾಂಗ್ರೆಸ್ ಮುಖಂಡರು.
ಬೆಂಗಳೂರು: ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ‘ಆಪರೇಷನ್ ಕಮಲ’ಕ್ಕೆ 'ಕೈ' ಪಾಳಯ ನಿಜಕ್ಕೂ ಬೆಚ್ಚಿ ಬಿದ್ದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟು ಬಗೆಹರಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ.
ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸಿರುವ ಬಗೆ ಕಾಂಗ್ರೆಸ್ ಶಾಸಕರು ಮರೆಮಾಚುತ್ತಿದ್ದಾರೆ ಎನ್ನಲಾಗುತ್ತಿದ್ದು, ಯಾರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನೋ ಗೊಂದಲದಲ್ಲಿ ಕಾಂಗ್ರೆಸ್ ಮುಖಂಡರಿದ್ದು, ಬಿಜೆಪಿ ಸಂಪರ್ಕದಲ್ಲಿರೋ ಶಾಸಕರ ಬಗ್ಗೆ ಕಾಂಗ್ರೆಸ್‌ಗೆ ನಿಖರ ಮಾಹಿತಿ ಸಿಗುತ್ತಿಲ್ಲ ಎನ್ನಲಾಗಿದೆ.
ಯಾವ ಶಾಸಕರು? ಎಷ್ಟು ಶಾಸಕರು? ಯಾವ ಕ್ಷೇತ್ರದ ಶಾಸಕರನ್ನು ಯಾವ ಬಿಜೆಪಿ ಮುಖಂಡ ಸಂಪರ್ಕಿಸಿದ್ದಾರೆ ಅನ್ನೋ ಮಾಹಿತಿ ಸಿಗದೇ ಪರದಾಡುತ್ತಿರುವ ಕಾಂಗ್ರೆಸ್ ಮುಖಂಡರು ಅಕ್ಟೋಬರ್ 3 ರಂದು ನಡೆಯುವ ಪರಿಷತ್ ಚುನಾವಣಾವರೆಗೂ ಕಾದುನೋಡುವ ತಂತ್ರ ಅನುಸರಿಸಲು ಮುಂದಾಗಿದ್ದಾರೆ.
ಏನಿದು ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ:
ಯಾರೆಲ್ಲ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಅನ್ನೋ ಗೊಂದಲದಲ್ಲಿರುವ ಕಾಂಗ್ರೆಸ್ ಮುಖಂಡರು ಅಕ್ಟೋಬರ್ 3ರಂದು ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆವರೆಗೂ ಕಾಯುವ ತೀರ್ಮಾನಕ್ಕೆ ಬಂದಿದ್ದಾರೆ. ಅಂದು ಯಾವ ಶಾಸಕರು ಗೈರಾಗುತ್ತಾರೆ? ಯಾವ ಶಾಸಕರು ಬಿಜೆಪಿ ಪರ ಮತ ಚಲಾಯಿಸುತ್ತಾರೆ ಅನ್ನೋದರೆ ಮೇಲೆ ಆಪರೇಷನ್ ಕಮಲಕ್ಕೆ ಯಾರು ಬಲಿಯಾಗಿದ್ದಾರೆ ಅನ್ನೋ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ತೀರ್ಮಾನಿಸಿದೆ ಎನ್ನಲಾಗಿದೆ.