ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ಸಂಬಂಧ ಸೋಮವಾರದಿಂದಲೇ ಸ್ಕ್ರೀನಿಂಗ್ ಕಮಿಟಿ ಸಭೆ ಆರಂಭವಾಗಿದ್ದು, ಇಂದು ಸಂಜೆಯೊಳಗೆ 130 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ಹಿರಿಯ ನಾಯಕ ಮಧುಸೂದನ್‌ ಮಿಸ್ತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಪಕ್ಷದ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸ್ಕ್ರೀನಿಂಗ್‌ ಕಮಿಟಿ ಸದಸ್ಯರು ಮತ್ತು ಸಂಸದರಾದ ಗೌರವ್‌ ಗೋಗೊಯ್‌ ಹಾಗೂ ಥಾಮರ್‌ಧ್ವಜ್‌ ಸಾಹೂ ಸೇರಿದಂತೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಸಿದ್ಧಪಡಿಸಿದ್ದ 130 ಅಭ್ಯರ್ಥಿಗಳ ಪಟ್ಟಿಯಲ್ಲಿ 10 ರಿಂದ 15 ಕ್ಷೇತ್ರದ ಅಭ್ಯರ್ಥಿಗಳ ಕುರಿತು ಸಭೆಯಲ್ಲಿ ಸಹಮತ ಮೂಡದ ಹಿನ್ನೆಲೆಯಲ್ಲಿ ಸಭೆ ಇಂದೂ ಮುಂದುವರೆದಿದ್ದು, ಇಂದು ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ. 


ಮೂಲಗಳ ಪ್ರಕಾರ, ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಎಲ್ಲಾ 7 ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವ ಚಿಮ್ಮನಕಟ್ಟಿ, ರಾಮಕೃಷ್ಣ, ಆರೋಪ ಎದುರಿಸುತ್ತಿರುವ ಮೇಟಿ, ಪರಮೇಶ್ವರ್​ ನಾಯ್ಕ್​ ಅವರ ಹೆಸರನ್ನು ಈ ಬಾರಿ ಪಟ್ಟಿಯಿಂದ ಕೈಬಿಡಲಾಗಿದ್ದು, ನಟ ಅಂಬರೀಷ್​ ಅವರಿಗೆ ಟಿಕೆಟ್ ನೀಡಲಾಗುವುದೇ, ಇಲ್ಲವೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.


ಒಟ್ಟಾರೆ, ಈ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕೇಂದ್ರೀಯ ಚುನಾವಣಾ ಸಮಿತಿ ಅನುಮೋದನೆ ದೊರೆತ ನಂತರ ಇಂದು ಸಂಜೆಯೊಳಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌ ಅವರು ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.