ಬೆಂಗಳೂರು: ಕರ್ನಾಟಕ ಮಕ್ಕಳ ಪಕ್ಷದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಕಾಂಗ್ರೆಸ್ ಶಾಸಕರಾದ ಎಸ್.ಟಿ ಸೋಮಶೇಖರ್, ಮುನಿರತ್ನ,ಬೈರತಿ ಬಸವರಾಜು ಸೇರಿದಂತೆ  ಹಲವರು ಶಾಸಕ ಅಶೋಕ್ ಖೇಣಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಖೇಣಿ ಮೇಲೆ ಹಲವು ಹಗರಣಗಳಿದ್ದು, ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದರಿಂದ ಬೆಂಗಳೂರು ಶಾಸಕರಿಗೆ ಇದರಿಂದ ತೊಡಕುಂಟಾಗುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬೆಂಗಳೂರಿನ ಶಾಸಕರು ದೂರು ನೀಡಿದ್ದಾರೆ.


ಖೇಣಿಯವರನ್ನು ಕಾಂಗ್ರೆಸ್ ನಿಂದ ದೂರ ಉಳಿಸುವಂತೆ ರಾಹುಲ್ ಗಾಂಧಿ ಮತ್ತು ಡಾ.ಜಿ.ಪರಮೇಶ್ವರ ಗೆ ಒತ್ತಾಯಿಸಿದ ಬೆಂಗಳೂರು ಶಾಸಕರು, ಖೇಣಿ ವಿರುದ್ಧ ನೈಸ್ ಹಗರಣ, ಭೂ ಹಗರಣ ಸೇರಿದಂತೆ ಹಲವು ಹಗರಣಗಳಿದ್ದು ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಕೊಂಡರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೊಂದರೆಯಾಗುವುದಾಗಿ ತಿಳಿಸಿದ್ದಾರೆ.


ಖೇಣಿ ಮೇಲಿರುವ ಆರೋಪಗಳೇನು?
* ನೈಸ್ ಅವ್ಯವಹಾರದಲ್ಲಿ ಖೇಣಿ ಮೇಲೆ ಆರೋಪವಿದೆ.
* ಒಪ್ಪಂದದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ಆರೋಪ.
* ಕಾಂಕ್ರಿಟ್ ರಸ್ತೆ ಮಾಡುವ ಬದಲು ಟಾರ್ ರಸ್ತೆ ನಿರ್ಮಾಣ.
* ಕಳೆಪೆ ಗುಣಮಟ್ಟದ ರಸ್ತೆ.
* ರಸ್ತೆ ಯೋಜನೆ ಪೂರ್ಣಗೊಳ್ಳದೇ ಟೋಲ್ ಸಂಗ್ರಹ.
* ಯೋಜನೆ ಅನುಷ್ಠಾನವಾಗಿ 19 ವರ್ಷವಾದರೂ ನೈಸ್ ಕಂಪನಿ ನಿರ್ದಿಷ್ಟ ವಿವರಗಳನ್ನು ನೀಡಿಲ್ಲ.
* ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವಿನಾಯಿತಿಯನ್ನು 5688 ಎಕರೆಗೆ ಬದಲಾಗಿ 14337 ಎಕರೆಗೆ ನೀಡಲಾಗಿದೆ.
*  ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ಉತ್ತೇಜಿಸಿದ್ದಾರೆ.
*  ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾದ 250 ಕೋಟಿ ರೂ ನಷ್ಟವಾಗಿದೆ.
ಹೀಗೆ ಖೇಣಿ ಮೇಲೆ ನೈಸ್ ಯೋಜನೆ ಸಂಬಂಧಿಸಿದಂತೆ ಹಲವು ಆರೋಪಗಳಿವೆ.