ಬೆಂಗಳೂರು:  ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ 32 ನೇ ಜಿಲ್ಲೆಗೆ ಬಂದಿರುವುದಾಗಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಈಗ ಕಾಂಗ್ರೆಸ್ ವ್ಯಂಗ್ಯವಾಡಿದೆ.


COMMERCIAL BREAK
SCROLL TO CONTINUE READING

ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್ ' ರಾಜ್ಯದೆಲ್ಲೆಡೆ ಬಿಜೆಪಿ ಪಾದಯಾತ್ರೆಗಳನ್ನು ನಡೆಸುತ್ತಿದೆ.ಅದಕ್ಕೆ ವೇಗ ಕೊಡಲು ಯಾದಗಿರಿ ಮತ್ತು ರಾಯಚೂರಿಗೆ ಬಂದಿದ್ದೇನೆ. ಈಗಾಗಲೇ 31ನೇ ಜಿಲ್ಲೆ ಮುಗಿಸಿಕೊಂಡು ಇಂದು 32 ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ' ಎಂದು ಹೇಳಿಕೆ ನೀಡಿದ್ದರು.



ಈಗ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಪಕ್ಷ ''ನಳಿನ್ ಕಟೀಲ್ ಅವರೇ, ರಾಜ್ಯದಲ್ಲಿ 32 ಜಿಲ್ಲೆಗಳಾ? ರಾಜ್ಯದಲ್ಲೆಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವಿರಿ & ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವಿರಿ, ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕವನ್ನು ಒಮ್ಮೆ ಕೊಂಡು ಓದಿ, ಕನಿಷ್ಠವಾದರೂ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿರಿ.' ಎಂದು ಗೇಲಿ ಮಾಡಿದೆ.


ಕರ್ನಾಟಕದಲ್ಲಿ ಇರುವುದು 30 ಜಿಲ್ಲೆಗಳು ಮಾತ್ರ, ಆದರೆ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕಟೀಲ್ ಅವರು ರಾಜ್ಯದಲ್ಲಿನ ಜಿಲ್ಲೆಗಳನ್ನು 32ಕ್ಕೆ ಹೆಚ್ಚಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದೆ.