ಆಗಸ್ಟ್ 16ರಿಂದ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆ: ಡಿಸಿಎಂ ಡಿ.ಕೆ.ಶಿವಕುಮಾರ್
`ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು: "ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಶುಕ್ರವಾರ ಈ ಮಾಹಿತಿ ನೀಡಿದರು.
“ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣ ಈ ವಿಚಾರದ ಬಗ್ಗೆ ಮಾಧ್ಯಮಗೋಷ್ಠಿ ಮಾಡಿರಲಿಲ್ಲ. ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ಮಾಡಲಾಗುವುದು. ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ” ಎಂದು ಮಾಹಿತಿ ನೀಡಿದರು.
“ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್ 16ರ ವರೆಗೂ ಮಾಡಲಾಗುವುದು. ಯುವ ಕಾಂಗ್ರೆಸ್ ಸದಸ್ಯರಾಗಲು ಬಯಸುವವರು ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಆನ್ ಲೈನ್ ಸದಸ್ಯತ್ವ ಪಡೆದವರಿಗೆ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡುವ ಅಧಿಕಾರ ಸಿಗಲಿದೆ. ಓರ್ವ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ. ರಾಜ್ಯಾಧ್ಯಕ್ಷ, ರಾಜ್ಯ ಮಟ್ಟದ ಪದಾಧಿಕಾರಿ, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಗೆ ಮತ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆಪ್ ನಲ್ಲಿ ವೀಕ್ಷಿಸಬಹುದು” ಎಂದು ತಿಳಿಸಿದರು.
“ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು 35 ವರ್ಷದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿ ಶುಲ್ಕ ರೂ 50 ರೂಪಾಯಿ ಕಟ್ಟಬೇಕು. ಅವರಿಗೆ ಗುರುತಿನ ಚೀಟಿ ನೀಡಲಾಗುವುದು. ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಚುನಾವಣೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುವುದು. ಸದಸ್ಯತ್ವ ನೋಂದಣಿ ಸಮಯದಲ್ಲಿ ಸದಸ್ಯತ್ವ ಪಡೆಯುವವರ ಮುಖಚರ್ಯೆಯನ್ನು ಸ್ಕ್ಯಾನ್ ಮಾಡಲಾಗುವುದು. ಇಡೀ ದೇಶದಲ್ಲಿ ಹೊಸ ನಾಯಕರ ಸೃಷ್ಟಿ ಮಾಡಲು ಪ್ರಕ್ರಿಯೆ ಆರಂಭವಾಗಿದ್ದು, ಯುವ ನಾಯಕರನ್ನು ಬೆಳೆಸಲು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ” ಎಂದು ಹೇಳಿದರು.
“ಇಡೀ ದೇಶದಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಇರಬೇಕು. ಅವರಿಗೆ ಜವಾಬ್ದಾರಿ ಇರಬೇಕು ಎಂದು ರಾಜೀವ್ ಗಾಂಧಿ ಅವರು ಒಂದು ಹೊಸ ಚಳುವಳಿ ಆರಂಭಿಸಿದರು. ನಾನು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದಾಗ ಅವರು “ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ನಾಯಕ” ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಈಗ ಯುವ ಕಾಂಗ್ರೆಸ್ ನಲ್ಲಿ ಯುವ ನಾಯಕರನ್ನು ಸೃಷ್ಟಿ ಮಾಡಲು ಈ ಹೆಜ್ಜೆ ಇಟ್ಟಿದ್ದಾರೆ” ಎಂದು ತಿಳಿಸಿದರು.
“ಹೀಗಾಗಿ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವಕರು ನಾಯಕರಾಗಬೇಕಾದರೆ ನಾಯಕತ್ವದ ಗುಣ ಹೊಂದಿಕೊಂಡು ಚುನಾವಣಾ ಕಣದಿಂದ ನಾಯಕರಾಗಬೇಕು. ನೇಮಕ ಮಾಡುವ ಪದ್ಧತಿ ಬೇಡ ಎಂದು ಮನಗೊಂಡು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಪಕ್ಷದ ಚುನಾವಣಾ ಆಯೋಗದ ಮೂಲಕ ಪಕ್ಷದ ಆಂತರಿಕ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಹೊಸ ನಾಯಕರನ್ನು ಹುಡುಕಲು ಈ ಆಂತರಿಕ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ” ಎಂದರು.
ಎಲ್ಲಾ ವರ್ಗದವರಿಗೆ ಮೀಸಲಾತಿ:
“ಈ ಚುನಾವಣೆಯಲ್ಲಿ ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೆ ಮೀಸಲಾತಿ ನೀಡಲಾಗುವುದು. ಬಳ್ಳಾರಿ, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಕೇಂದ್ರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಲಾಗಿದೆ” ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ: ವಿಶೇಷ ಕಾರ್ಯಕ್ರಮ ರೂಪಿಸಲು ಸಮಿತಿ ರಚನೆ
ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿ 100 ವರ್ಷ ಪೂರ್ಣಗೊಂಡಿದೆ. ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ಗಾಂಧಿಜೀ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಸಂಭ್ರಮಾಚರಣೆ ಮಾಡಲು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ. ಈ ದೃಷ್ಟಿಯಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಕಾರ್ಯಕ್ರಮದ ರೂಪುರೇಷೆ ಮಾಡಲು ಹೆಚ್.ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ, ವೀರಪ್ಪ ಮೋಯ್ಲಿ ಅವರು ಮಾರ್ಗದರ್ಶಕರಾಗಿ, ಸಲಹಾ ಸಮಿತಿ ರಚಿಸಲಾಗುವುದು. ಬಿ.ಎಲ್ ಶಂಕರ್ ಅವರು ಈ ಸಮಿತಿಯ ಸಂಯೋಜಕರಾಗಿರಲಿದ್ದು, 15 ಜನ ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 60 ಸದಸ್ಯರುಗಳ ಸಮಿತಿ ಇದಾಗಿದೆ. ಅವರು ಚರ್ಚೆ ಮಾಡಿ ಸರ್ಕಾರದ ವತಿಯಿಂದ ಹಾಗೂ ಪಕ್ಷದ ವತಿಯಿಂದ ಯಾವ ಕಾರ್ಯಕ್ರಮ ಮಾಡಬಹುದು ಎಂದು ಸಲಹೆ ನೀಡಲಿದ್ದಾರೆ.
ಈ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮ, ತ್ಯಾಗ ಬಲಿದಾನಗಳ ಬಗ್ಗೆ ಮಾಹಿತಿ ನೀಡಲಾಗುವುದು. ಪಕ್ಷಬೇಧ ಮರೆತು, ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ಪಡೆದು ಗಾಂಧಿ ಅವರನ್ನು ಸ್ಫೂರ್ತಿಯಾಗಿ ಪಡೆದು ಅವರ ಹಾದಿಯಲ್ಲಿ ಹೆಜ್ಜೆ ಇಡಲು ಕಾರ್ಯಕ್ರಮ ರೂಪಿಸಲಾಗುವುದು.
ಪ್ರಶ್ನೋತ್ತರ:
ನೀವು ಕಾರ್ಯಕರ್ತರ ಪಕ್ಷ ಕಟ್ಟಲು ಪ್ರಯತ್ನಿಸುತ್ತಿದ್ದು, ಇಷ್ಟು ಕೇವಲ 15 ದಿನಗಳ ಅಂತರದಲ್ಲಿ ತರಾತುರಿಯಲ್ಲಿ ಚುನಾವಣೆ ಮಾಡುತ್ತಿರುವುದೇಕೆ ಎಂದು ಕೇಳಿದಾಗ, “ನೀವು ಯಾವ ಕ್ಷಣದಲ್ಲಿ ಬೇಕಾದರೂ ಸದಸ್ಯತ್ವ ಪಡೆಯಬಹುದು. ಇದಕ್ಕಾಗಿ ಒಂದು ತಿಂಗಳ ಅವಕಾಶವಿದೆ. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಆಂತರಿಕ ಚುನಾವಣೆ ನಡೆಯುತ್ತಿಲ್ಲ. ಈ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವ ಪಕ್ಷದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು. ಪಕ್ಷದ ಐವೈಸಿ ಆಪ್ ನಲ್ಲಿ ಈ ಸದಸ್ಯತ್ವ ಹಾಗೂ ಮತದಾನದ ಮಾಹಿತಿ ಇರಲಿದೆ” ಎಂದರು.
ಗೆದ್ದ ಮತ್ತು ಸೋತ ಅಭ್ಯರ್ಥಿಗಳ ನಡುವೆ ಗುಂಪುಗಾರಿಕೆ ಹೆಚ್ಚಾಗುವುದಿಲ್ಲವೇ ಎಂದು ಕೇಳಿದಾಗ, “ಯಾರು ಹೆಚ್ಚು ಮತ ಪಡೆಯುತ್ತಾರೆ ಅವರು ಅಧ್ಯಕ್ಷರಾಗಿರುತ್ತಾರೆ. ಎರಡನೇ ಸ್ಥಾನ ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಒಟ್ಟು ಏಳು ಮಂದಿ ಉಪಾಧ್ಯಕ್ಷರಾಗಿರುತ್ತಾರೆ. ಇಲ್ಲಿ ಗುಂಪುಗಾರಿಕೆ ಇರುವುದಿಲ್ಲ. ನೇಮಕಾತಿ ಮೂಲಕ ಆಯ್ಕೆ ಮಾಡಿದರೆ ಆಗ ಗುಂಪುಗಾರಿಕೆಗೆ ಹೆಚ್ಚು ಅವಕಾಶವಿರುತ್ತದೆ. ಶಿಷ್ಯರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಚುನಾವಣೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸಾಮರ್ಥ್ಯ ಇರುವವರು ತಕ್ಕ ಸ್ಥಾನಮಾನ ಪಡೆಯಲಿದ್ದಾರೆ” ಎಂದು ತಿಳಿಸಿದರು.
ಕಳೆದ ಬಾರಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಅದಕ್ಕೆ ಈ ಬಾರಿ ಮತ ಏಣಿಕೆ ಇರುವುದಿಲ್ಲ. ಸದಸ್ಯತ್ವ ಪಡೆದವನು ಮತ ಹಾಕಿದ ತಕ್ಷಣ ಆ ಮತ ಅಭ್ಯರ್ಥಿಯ ಬಳಿ ಸೇರುತ್ತದೆ. ಈ ಬಾರಿ ಚುನಾವಣೆಯನ್ನು ನಾವು ಮತ್ತಷ್ಟು ಮಾರ್ಪಾಡು ಮಾಡಿದ್ದೇವೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ, ಪಕ್ಷದ ಚುನಾವಣಾ ಉಸ್ತುವಾರಿಯಾಗಿರುವ ಪಿ.ಐ ಅಹ್ಮದ್ ನಾಸಿರ್, ಪ್ರದೇಶ ರಿಟರ್ನಿಂಗ್ ಅಧಿಕಾರಿ ಪ್ರಮೋದ್ ಕುಮಾರ್, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮಯ್ಯ ಅವರು ಉಪಸ್ಥಿತರಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.