ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ: ಕುಮಾರಸ್ವಾಮಿ ತಿರುಗೇಟು
ಮೊದಲು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಎಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಮೊದಲು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ ಎಂದಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ನಾವು ಧರ್ಮ, ದೈವದ ಮೇಲೆ ಆಳವಾದ ನಂಬಿಕೆ, ಅಪಾರವಾದ ಗೌರವ ಹೊಂದಿದ್ದೇವೆ. ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುವುದು ನಾನು ನಂಬಿದ ಜಾತ್ಯಾತೀತತೆ. ಆದರೆ ನೀವು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದು ಕೇವಲ ಮತಕ್ಕಾಗಿ ಎಂದು ಕಿಡಿ ಕಾರಿದ್ದಾರೆ
ರಾಹುಲ್ ಗಾಂಧಿ ಓರ್ವ ಅಪ್ರಬುದ್ಧ ಅಧ್ಯಕ್ಷ
ಬಹುಸಂಖ್ಯಾತರನ್ನು ಕಡೆಗಣಿಸಿದ ನಿಮ್ಮ ನಡವಳಿಕೆಯಿಂದಾಗಿಯೇ ಇಂದು ನಿಮ್ಮ ಪಕ್ಷ ಅಳಿವಿನ ಅಂಚಿನಲ್ಲಿದೆ. ಮುಳುಗುವಾಗ ನಿಮ್ಮ ಪಕ್ಷಕ್ಕೆ ಸಮರ್ಥ ನಾಯಕ ಮತ್ತು ನಿಜ ಜಾತ್ಯತೀತ ನಾಯಕನ ಅಗತ್ಯವಿತ್ತು. ಆದರೆ ಭಾರತದ ಸಾಮಾಜಿಕ, ರಾಜಕೀಯ ವಾಸ್ತವನ್ನರಿಯದ ನಿಮ್ಮಂಥ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧರ್ಮವನ್ನು ಒಡೆದಿದ್ದೀರಿ
ವೀರಶೈವ ಲಿಂಗಾಯತರನ್ನು ಒಡೆದು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣರ ಹೆಸರನ್ನು, ಬಸವತತ್ವವನ್ನು ದುರ್ಬಳಕೆ ಮಾಡಿಕೊಂಡ ನಿಮ್ಮಂತ ಪಕ್ಷದವರಿಂದ ಬುದ್ಧಿ ಹೇಳಿಸಿಕೊಳ್ಳವಷ್ಟು ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ. “ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಡಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು” ಎಂಬ ವಚನ ಸಾಲಿನಂತಾಗಿದೆ ನಿಮ್ಮ ಪಕ್ಷದ ಸ್ಥಿತಿ. ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ. ರಾಜ್ಯದಲ್ಲಿ ತೇಲಿಕೊಂಡಿದ್ದೀರಿ. ಮುಂದೆ ಇಲ್ಲಿಯೂ ಮುಳುಗಲಿದ್ದೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ನೀವು ನಂಬಿದ್ದ ಡೋಂಗಿ ಜಾತ್ಯಾತೀತ ಪಾಠ ಕಲಿಸಲಿದೆ
ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆಯನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ನಿಮ್ಮಂಥವರು ಸುಲಭವಾಗಿ ತುತ್ತಾಗುವುದರಲ್ಲಿ ಅನುಮಾನವಿಲ್ಲ. ನೀವು ನಂಬಿದ್ದ ಡೋಂಗಿ ಜಾತ್ಯಾತೀತವಾದ ನಿಮಗೆ ಪಾಠ ಕಲಿಸುತ್ತಿದೆ. ಹೀಗಾಗಿ ಇಂದು ದೇಗುಲ, ಮಠ ಮಂದಿರಗಳಿಗೆ ಹೋಗುತ್ತಿದ್ದೀರಿ. ಮುಂದೊಂದು ದಿನ ಈ ಕಪಟ ನಡವಳಿಕೆಗಳಿಗೂ ಜನ ಉತ್ತರ ಕೊಡಲಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಜೆಡಿಎಸ್ ಟೀಕಿಸುವ ನಿಮಗೆ ಭಯ ಶುರುವಾಗಿದೆ
ಜೆಡಿಎಸ್ ಅನ್ನು ಟೀಕಿಸುವಾಗ ನಿಮ್ಮ ಮಾತುಗಳಲ್ಲಿ ಭಯದ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಕಾವೇರಮ್ಮನ ಮಡಿಲಲ್ಲಿ ನಿಮ್ಮ ಪಕ್ಷವನ್ನು ಈ ಬಾರಿ ಜನ ಧೂಳೀಪಟ ಮಾಡಲಿದ್ದಾರೆ. ಮುಂದಿನ ಆ ದುಸ್ವಪ್ನ ನಿಮ್ಮ ಬಾಯಲ್ಲಿ ಆ ರೀತಿ ಮಾತಾಡಿಸಿದೆ. ಜೆಡಿಎಸ್ ಜಾತ್ಯಾತೀತ ಪಕ್ಷ ಅಲ್ಲ ಅಲ್ಲವೇ? ಹಾಗಿದ್ದರೆ ನಮ್ಮ ಪಕ್ಷದ ಬೆಂಬಲದೊಂದಿಗೆ ಅಧಿಕಾರ ಹಿಡಿದಿರುವುದರಿಂದ ನೈತಿಕತೆ ಹೆಸರಲ್ಲಿ ರಾಜಿನಾಮೆ ಕೊಡಿಸಿ. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ನೀವು ಮಾಡಿಕೊಂಡಿರುವ ಮೈತ್ರಿ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಸವಾಲು ಹಾಕಿದ್ದಾರೆ.
ನಿಮ್ಮಿಂದ ಬುದ್ಧಿಮಾತು ಹೇಳಿಸಿಕೊಳ್ಳುವ ದಾರಿದ್ರ್ಯ ನಮಗಿಲ್ಲ
ಜೆಡಿಎಸ್ ಬಸವಣ್ಣನ ಮಾತಿನಂತೆ ನುಡಿದಂತೆ ನಡೆಯಬೇಕು ಎಂದಿದ್ದೀರಿ. ನಾವು ನುಡಿದಂತೆಯೇ ನಡೆಯುತ್ತಿದ್ದೇವೆ. ಇಲ್ಲಿ ನುಡಿದಂತೆ ನಡೆ ಎಂದರೆ ಏನು ಅರ್ಥ? ನೀವು ನುಡಿದಂತೆ ನಾವು ನಡೆಯಬೇಕು ಎಂದಾ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ ಅವರು, ನಾವು ನೀವು ಹೇಳಿದಂತೆ ಕೇಳುತ್ತೇವೇ ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪ್ರಾಬಲ್ಯದ ಮಂಡ್ಯದಲ್ಲಿ ಶನಿವಾರ ತಮ್ಮ ಜನಾಶೀರ್ವಾದ ಯಾತ್ರೆಯ 4ನೇ ಹಂತದ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜೆಡಿಎಸ್ ಎಂದರೆ ಜನತಾ ದಳ, ಜಾತ್ಯತೀತ ಪಕ್ಷ ಎಂದಲ್ಲ. ಬದಲಾಗಿ, ಜನತಾ ದಳ ಮತ್ತು ಸಂಘ ಪರಿವಾರ ಎಂದರ್ಥ ಎಂದು ಟೀಕಿಸಿದ್ದರು.