ಈ ಚುನಾವಣೆಯಲ್ಲಿ ಕಾಂಗ್ರೆಸ್ 25 ಸ್ಥಾನಕ್ಕೆ ಇಳಿದರೂ ಅಚ್ಚರಿಯಿಲ್ಲ :ಕುಮಾರಸ್ವಾಮಿ ತಿರುಗೇಟು
ಸಿದ್ದರಾಮಯ್ಯ ದುರಹಂಕಾರ ಹೀಗೇ ಮುಂದುವರೆದರೆ ಕಾಂಗ್ರೆಸ್ ಈ ಚುನಾವಣೆಯಲ್ಲಿ 25 ಸ್ಥಾನಕ್ಕೆ ಇಳಿದರೂ ಅಚ್ಚರಿಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಹಾಸನ : ಜೆಡಿಎಸ್ ಪಕ್ಷವನ್ನು ಕೆದಕಿದರೆ ಕಾಂಗ್ರೆಸ್ ಪಡೆ ಅಧೋಗತಿಗೆ ಹೋಗಲಿದೆ. ಸಿದ್ದರಾಮಯ್ಯ ದುರಹಂಕಾರ ಹೀಗೇ ಮುಂದುವರೆದರೆ ಕಾಂಗ್ರೆಸ್ ಈ ಚುನಾವಣೆಯಲ್ಲಿ 25 ಸ್ಥಾನಕ್ಕೆ ಇಳಿದರೂ ಅಚ್ಚರಿಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ನಗರ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಕನಸು, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 25 ಸ್ಥಾನಗಳನ್ನು ಗಳಿಸುವುದೂ ಕಷ್ಟ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಒಂದಾದರೂ ತಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎದ್ನು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಭವಿಷ್ಯ ಹೇಳೋದಕ್ಕೆ ಶುರು ಮಾಡಿದ್ದು ಯಾವಾಗ? ಒಂದು ದಿನವಾದರೂ ರೈತರ ಜೊತೆ ಕುಳಿತು ಮಾತನಾಡಿದ್ದಾರೆಯೇ? ಜನರನ್ನೆಲ್ಲಾ ತಮ್ಮ ಜೇಬಿನಲ್ಲಿ ಇಟ್ಟುಕೊಂಡವರಂತೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ, ಆದರೆ ಅದು ಸಾಧ್ಯವಿಲ್ಲ. ಮುಂದೆ ಯಾರು ಗೆಲ್ಲಬೇಕು ಎಂಬುದನ್ನು ಜನತೆ ತಿರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ
ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಿರುವುದಾಗಿ ಹೇಳಿದ ಕುಮಾರಸ್ವಾಮಿ ಅವರು, ಚುನಾವಣೆಯಲ್ಲಿ ಜೆಡಿಎಸ್ 113 ಸ್ಥಾನಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.