ಕನಕಪುರ: ಕನಿಷ್ಠ 3 ಸಾವಿರ ಪಂಚಾಯಿತಿಗಳಲ್ಲಿ ಸಿಎಸ್ಆರ್ ಅನುದಾನ ಬಳಸಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕನಕಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಡಿಕೆಶಿ, ‘ಈ ನೂತನ ಶಾಲೆಗಳು 1 ಎಕರೆ ಜಾಗದಲ್ಲಿ ಆಟದ ಮೈದಾನ ಸೇರಿದಂತೆ ಅತ್ಯುತ್ತಮ ತರಗತಿ ಕೊಠಡಿಗಳನ್ನು ಹೊಂದಿರಲಿವೆ. 5 ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಯಾಗಲಿದೆ. ಸರ್ಕಾರಿ ಶಿಕ್ಷಕರಿಗೆ ಗುಣಮಟ್ಟದ ತರಬೇತಿ ಕೊಡಿಸುತ್ತೇವೆ. ನಮ್ಮ ಸರ್ಕಾರಿ ಶಿಕ್ಷಕರಲ್ಲಿ ಅತ್ಯಂತ ದಕ್ಷ ಹಾಗೂ ಉತ್ತಮ ಶಿಕ್ಷಣ ಪಡೆದವರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಲಿದ್ದಾರೆ’ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

‘ಪ್ರತಿ ಬಾರಿಯೂ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯವರು SSLC ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದರು. ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಹೋದಾಗ ಎಲ್ಲಾ ಜಿಲ್ಲೆಯ ಮಕ್ಕಳಿದ್ದರು. ಉಡುಪಿಯ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದ, ಉಡುಪಿಯವರು ಮಾತ್ರ ಬುದ್ದಿವಂತರಲ್ಲ ನಮ್ಮ ಮಕ್ಕಳು ಮುಂದಿದ್ದಾರೆ, ಶಿಕ್ಷಕರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.


ಇದನ್ನೂ ಓದಿ: ಸಕ್ಕರೆ ನಾಡು ಮಂಡ್ಯದಲ್ಲಿ ಇನ್ನು ಆರದ ಕಾವೇರಿ ಕಿಚ್ಚು


‘ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗ ಈ 4 ಅಂಗಗಳಿದ್ದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಈ ಸಮಾಜ ಉಳಿಯಬೇಕು ಎಂದರೆ ಸೈನಿಕ, ಶಿಕ್ಷಕ, ಕೃಷಿಕ, ಕಾರ್ಮಿಕರು ಇರಬೇಕು. ಅನೇಕ ಜವಾಬ್ದಾರಿಗಳಿದ್ದ ಕಾರಣ ನನ್ನ ಊರಿನ ಶಿಕ್ಷಕರನ್ನು ನೋಡಲು ಆಗಿರಲಿಲ್ಲ, ಈಗ ಬಂದಿದ್ದೇನೆ, ನಮ್ಮ ಮಕ್ಕಳನ್ನು ನಿಮ್ಮ ಕೈಗೆ ಕೊಟ್ಟಿದ್ದೇವೆ, ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುತ್ತಿದ್ದೀರಾ? ಎಂದು ನಂಬಿಕೆ ಇಟ್ಟಿದ್ದೇನೆ. ನಾನು ಇಲ್ಲಿಗೆ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ಕನಕಪುರಕ್ಕೆ ಬಂದಾಗ ನಾವೆಲ್ಲಾ ಒಂದು ಕುಟುಂಬದವರು, ಅಧಿಕಾರ, ಕುರ್ಚಿಗಳೆಲ್ಲಾ ವಿಧಾನಸೌಧದಲ್ಲಿ ಮಾತ್ರ. ನಮ್ಮ ತಾಲೂಕಿನಲ್ಲಿರುವ ಶಿಕ್ಷಕರಿಗೆ ಯಾರ ಒತ್ತಡವೂ ಇರುವುದಿಲ್ಲ, ಎನ್‌ಪಿಎಸ್‌- ಓಪಿಎಸ್ ಬಗ್ಗೆ ಕೊಟ್ಟ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ’ ಎಂದರು.


"ತ್ರೇತಾಯುಗದಲ್ಲಿ ಗುರುಗಳು ಶಿಷ್ಯರನ್ನು ಜಂಗಿಸಿ ವಿದ್ಯೆ ಕಲಿಸುತ್ತಿದ್ದರು, ದ್ವಾಪರದಲ್ಲಿ ದಂಡಿಸಿ ಕಲಿಸುತ್ತಿದ್ದರು, ಈಗ ಕಲಿಯುಗದಲ್ಲಿ ಗುರುಗಳೇ ಶಿಷ್ಯರಿಗೆ ವಂದಿಸಿ ಕಲಿಸಬೇಕಾದ ಕಾಲ ಬಂದಿದೆ. ನನ್ನ ಮಗಳು ಶಾಲೆ ನೋಡಿಕೊಳ್ಳುತ್ತಿದ್ದಾಳೆ. ಅಲ್ಲಿ ಪ್ರತಿದಿನ ಪೋಷಕರನ್ನು ಸಂಬಾಳಿಸುವುದೇ ದೊಡ್ಡ ಕಷ್ಟವಾಗಿದೆ ಎಂಬುದು ಅವಳ ಆರೋಪ. ನಾವುಗಳು ನೈತಿಕ ಶಿಕ್ಷಣ, ಮೌಲ್ಯ ಎಂದು ಹೇಳಿದರು, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಬೇರೆಯದೇ ಲೋಕದಲ್ಲಿ ಇದ್ದಾರೆ ಎಂದು ಹೇಳುತ್ತಿರುತ್ತಾಳೆ" ಎಂದರು.


ಶಿಕ್ಷಣಕ್ಕೆ 15 ಎಕರೆ ಸ್ವಂತ ಜಮೀನು ದಾನ


ನನ್ನ ಹುಟ್ಟೂರು ದೊಡ್ಡ ಆಲನಹಳ್ಳಿಯಲ್ಲಿ 5 ಎಕರೆ ಸ್ವಂತ ಜಮೀನನ್ನು ಶಿಕ್ಷಣಕ್ಕೆ ಮೀಸಲು ಎಂದು ಬರೆದುಕೊಟ್ಟಿದ್ದೇನೆ. ಕೋಣನಹಳ್ಳಿಯಲ್ಲಿ 10 ಎಕರೆ ನೀಡಿದ್ದೇನೆ. ಟೊಯೋಟಾ ಅವರ ಬಳಿ ಈ ಹಿಂದೆ ಮಾತನಾಡಿ 370 ಶೌಚಾಲಯಗಳ ನಿರ್ಮಾಣ ಮಾಡಿಸಿದ್ದೆ ಎಂದು ಮಾಹಿತಿ ನೀಡಿದರು.


ಕಾಂಗ್ರೆಸ್ ನವನು ಎಂದು ವೇದಿಕೆ ಹತ್ತಿಸಿರಲಿಲ್ಲ


ನನಗೆ ಉತ್ತಮ ಶಿಕ್ಷಣ ಕೊಡಲು ನಮ್ಮ ಪೋಷಕರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕನಕಪುರ, ದೊಡ್ಡ ಆಲನಹಳ್ಳಿ ಆನಂತರ ಬೆಂಗಳೂರಿಗೆ ಸೇರಿಸಿದರು, ನನ್ನ ಓದಿನ ಬಗ್ಗೆ ದೊಡ್ಡ ಪುಸ್ತಕ ಬರೆಯಬಹುದು. ನಾನು ವಿದ್ಯೆ ಪಡೆಯಲು ಪಟ್ಟ ಕಷ್ಟ ನನ್ನ ಮಕ್ಕಳು ಪಡೆಬಾರದು ಎಂದು ಉತ್ತಮ ಶಾಲೆಗಳಿಗೆ ಸೇರಿಸಿದೆ. ನಮ್ಮನ್ನು ಓದಿಸುತ್ತಿರುವ ನೀನು ಏಕೆ ಓದಲಿಲ್ಲ ಎಂದು ಕೇಳುತ್ತಾರೆ ಎಂದು 48 ನೇ ವರ್ಷದಲ್ಲಿ ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಪದವಿ ಪಡೆದೆ.


ಇದನ್ನೂ ಓದಿ:  ಬಿಜೆಪಿಗರ ನಿದ್ದೆಗೆಡಿಸಿದ ವಿಪಕ್ಷ ನಾಯಕನ ಆಯ್ಕೆ ಕಸರತ್ತು


ನಾನು ಮಂತ್ರಿ ಆದರೂ ಸಂತೋಷವಾಗಿರಲಿಲ್ಲ, ಪದವಿ ಪಡೆದಾಗ ಅತ್ಯಂತ ಹೆಚ್ಚು ಸಂತೋಷ ಆಯಿತು. ಮಾಜಿ ಮಂತ್ರಿ ಆದ ನಂತರ ಎಂ.ಎ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದೆ. ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವದ ದಿನ ನನ್ನನ್ನು ವೇದಿಕೆಗೆ ಕರೆಸಬಾರದು ಎಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಶಂಕರಮೂರ್ತಿಯವರು ಹಠ ಮಾಡುತ್ತಿದ್ದರೆ, ವಿಶ್ವವಿದ್ಯಾಲಯದವರು ಮಾಜಿ ಮಂತ್ರಿಗೆ ಪ್ರಮಾಣ ಪತ್ರ ನೀಡಬೇಕು ಎಂದು ಹಠ.


ಶಂಕರಮೂರ್ತಿಯವರು ಅವನು ಕಾಂಗ್ರೆಸ್ ಅವನು ಎಂದು ವೇದಿಕೆ ಹತ್ತಲು ಬಿಡದೆ ಕೆಳಗೆ ಕೂರಿಸಿದರು. ಆನಂತರ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಅರ್ಜಿ ಹಾಕಿ ಆಯ್ಕೆಯಾದೆ, ಇಂದು ಶಂಕರಮೂರ್ತಿ ಅವರು ಶಿವಮೊಗ್ಗದಲ್ಲಿ ಕುಳಿತಿದ್ದಾರೆ ನಾನು ಜನಪ್ರತಿನಿಧಿಯಾಗಿ ನಿಮ್ಮ ಮುಂದೆ ಇದ್ದೇನೆ" ಎಂದರು.


ಅಶೋಕನ ಬಳಿ ಏನು ವಿಶೇಷವಿದೆ


ನಾನು 1985 ರಲ್ಲಿ ಚುನಾವಣೆಗೆ ನಿಂತಿದ್ದೆ, 87ರಲ್ಲಿ ಜಿಲ್ಲಾ ಪಂಚಾಯಿತಿ, 89ರಲ್ಲಿ ವಿಧಾನಸಭೆ ಪ್ರವೇಶ ಮಾಡಿದೆ ಆಂದಿನಿಂದ ಸಾತನೂರು- ಕನಕಪುರದ ಜನರು ಗೆಲ್ಲಿಸುತ್ತಾ ಬಂದಿದ್ದೀರಿ. ನಿಮ್ಮಿಂದ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದೇನೆ. ಇಡೀ ರಾಜ್ಯದಲ್ಲಿ 1,23,000 ಅಂತರದಿಂದ ನನ್ನನ್ನು ಗೆಲ್ಲಿಸಿ ಇಡೀ ದೇಶಕ್ಕೆ ಒಂದು ಸಂದೇಶವನ್ನು ನೀಡಿದ್ದೀರಿ. ನನಗೆ ಮತ ಹಾಕಿದವರು, ಹಾಕದವರು ಇಬ್ಬರೂ ಬಂದಿದ್ದೀರಿ. ನೀವೆಲ್ಲಾ ಯಾರಿಗೆ ಮತ ಹಾಕಿದ್ದೀರಿ ಗೊತ್ತಿಲ್ಲ.  ಶಿಕ್ಷಕರ ಹಾಗೂ ಅಧಿಕಾರಿಗಳ ಒಟ್ಟು 1,119 ಮತ ಚಲಾವಣೆಯಾಗಿದ್ದು 867 ನನಗೆ, 70 ದಳಕ್ಕೆ 115 ಬಿಜೆಪಿಗೆ ಹಾಕಿದ್ದಾರೆ. ಅಶೋಕನನ್ನು ನೋಡಿ ಹಾಕಿದರೋ ಅಥವಾ ಪಕ್ಷ ನೋಡಿ ಹಾಕಿದಿರೋ ಅಶೋಕನ ಬಳಿ ಏನಾದರೂ ವಿಶೇಷವಿತ್ತೊ ಅದನ್ನು ನೋಡಿ ಮತ ಹಾಕಿದ್ದೀರೋ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.