ವಿಧಾನಪರಿಷತ್ ಚುನಾವಣೆ: ಮೂವರೂ ಅಭ್ಯರ್ಥಿಗಳ ಅವಿರೋಧ ಆಯ್ಕೆ
ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹಿಂದೆ ಸರಿದಿದ್ದರಿಂದ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಕಾಂಗ್ರೆಸ್ ಪಕ್ಷದ ನಜೀರ್ ಅಹಮದ್, ಎಂ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ಪಕ್ಷದ ಹೆಚ್.ಎಂ.ರಮೇಶ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 3 ರಂದು ನಡೆಯಬೇಕಿದ್ದ ವಿಧಾನಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಜೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ಪಕ್ಷದಿಂದ ಹೆಚ್.ಎಂ.ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದರು. ಅಲ್ಲದೆ, ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಹಿಂದೆ ಸರಿದಿದ್ದರಿಂದ ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನಂತರ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಕುಮಾರಸ್ವಾಮಿ, ‘ಇಂದು ಮಧ್ಯಾಹ್ನ 3ಗಂಟೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿತ್ತು. ಯಾರೂ ನಾಮಪತ್ರ ಹಿಂಪಡೆಯಲಿಲ್ಲ. ಹೀಗಾಗಿ ಈ ಮೂವರು ಅಭ್ಯರ್ಥಿಗಳನ್ನು ಚುನಾಯಿತ ಅಭ್ಯರ್ಥಿಗಳೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ’ ಎಂದು ಹೇಳಿದರು. ಈ ಮೂಲಕ ಮೈತ್ರಿ ಸರಕಾರದ ಅಭ್ಯರ್ಥಿಗಳು ನಿರಾಯಾಸವಾಗಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.