ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಸಂಯಮದಿಂದ ವರ್ತಿಸುವಂತೆ ಸಿದ್ದರಾಮಯ್ಯ ಮನವಿ
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಯನ್ನು ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ
ಬೆಂಗಳೂರು: ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ (Sangolli Rayanna) ಪ್ರತಿಮೆ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.
ನಾನು ಈಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ, ಅಲ್ಲಿನ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂದವರು ತಿಳಿಸಿದರು.
ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಯನ್ನು ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ ಎಂದು ಸರ್ಕಾರದ ವಿರುದ್ಧ ಹರಿಹೈದ ಸಿದ್ದರಾಮಯ್ಯ ನೆಲ, ಜಲ, ಭಾಷೆ ಮತ್ತು ನಾಡಿನ ಹೆಮ್ಮೆಯ ವ್ಯಕ್ತಿತ್ವಗಳ ವಿಷಯದಲ್ಲಿ ರಾಜಿ ಸಲ್ಲದು ಎಂದಿದ್ದಾರೆ.
ಇದೇ ವೇಳೆ ಕನ್ನಡ ಸಂಘಟನೆಗಳು ಮತ್ತು ರಾಯಣ್ಣ ಅಭಿಮಾನಿಗಳು ಕೂಡಾ ಸಂಯಮದಿಂದ ವರ್ತಿಸಿ ವಿವಾದ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.