ಬೆಂಗಳೂರು: ಕೊರೋನಾ ಸೊಂಕು ಹೆಚ್ಚಳವಾಗುತ್ತಿರುವ ವೇಳೆಯಲ್ಲೆ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಬಿಬಿಎಂಪಿ ಹಾಗೂ ಇತರೆ ಇಲಾಖೆಗಳು ಕೋಳಿ ಜಗಳವಾಡುತ್ತಾ ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಉಸ್ತುವಾರಿ ಜಗದೀಶ್ ವಿ ಸದಂ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಸರ್ಕಾರದ ಮೇಲೆ ಹಾಗೂ ಸಚಿವರುಗಳ ಮೇಲೆ ನಿಯಂತ್ರಣ ಕಳೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಸಹಾಯಕರಾಗಿ ಕುರ್ಚಿ ಮೇಲಿನ ಆಸೆಗೆ ಯಾರನ್ನೂ ನಿಯಂತ್ರಿಸದೇ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.


ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಸರ್ಕಾರದ ಪ್ರಭಾವಿ ಸಚಿವರುಗಳು ಮನಸ್ಸಿಗೆ ಬಂದ ಕಾನೂನು ಮಾಡಿಕೊಂಡು ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಆರೋಗ್ಯ ಸಚಿವರನ್ನು ಮೂಲೆ ಗುಂಪು ಮಾಡಿರುವ ಸರ್ಕಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲೆ ಕೊರೊನಾ ಚಿಕಿತ್ಸೆ ನೀಡಲು ಸಾಕಷ್ಟು ಬೆಡ್ ಗಳು  ಖಾಲಿ ಇದ್ದರೂ ಸಹ  ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ಸಾಯುವ ಪರಿಸ್ಥಿತಿಗೆ ದೂಡುತ್ತಿದ್ದಾರೆ.  ಸಚಿವ ಸುಧಾಕರ್ ಅವರು ಏನೂ ಗೊತ್ತಿಲ್ಲದಂತೆ ಇರುವುದು ನೋಡಿದರೆ ಚಿಕಿತ್ಸೆಗಾಗಿ ದುಬಾರಿ  ದರಪಟ್ಟಿಯನ್ನು ನಿಗದಿಗೊಳಿಸಿರುವ  ಖಾಸಗಿ ಆಸ್ಪತ್ರೆಗಳ ಅವರ ಜತೆ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ.


ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಯೊಬ್ಬರು ಮಾಧ್ಯಮದ ಮುಂದೆ ಹೇಳಿಕೆ ನೀಡುತ್ತಾರೆ ಎಂದರೆ ಸರ್ಕಾರ ಯಾವ ಮಟ್ಟಕ್ಕೆ ತನ್ನ ನಿಯಂತ್ರಣ ಕಳೆದುಕೊಂಡಿದೆ ಎಂಬುದನ್ನು ನೋಡಬಹುದು. ಇದರಿಂದಾಗಿ ಸೋಂಕು ನಿಯಂತ್ರಣದಲ್ಲಿಯೂ ಸಹ ಸರ್ಕಾರ ಹಳಿ ತಪ್ಪಿದೆ. ಕೇವಲ ಅಧಿಕಾರ, ಹಣದ ಹಿಂದೆ ಬಿದ್ದು ಜನ ಸಾಮಾನ್ಯರ ಸಾವಿನ ಮೇಲೆ ಚೆಲ್ಲಾಟ ನಡೆಯುತ್ತಿರುವ ಭ್ರಷ್ಟ ಸರ್ಕಾರ ಎಂದು ಟೀಕಿಸಿದ್ದಾರೆ.


ಈ ಕೂಡಲೇ ಮುಖ್ಯಮಂತ್ರಿಗಳು ಸರ್ಕಾರದಲ್ಲಿ ಸಮನ್ವಯ ಸಾಧಿಸಿ ಜನ ಸಾಮಾನ್ಯರ ಜೀವದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.