ನವದೆಹಲಿ: ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಸ್ಪೀಕರ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯ ಇಂದು ತೀರ್ಪು ನೀಡಲಿದ್ದು, ಈ ತೀರ್ಪು ಅನರ್ಹಗೊಂಡಿರುವ ಶಾಸಕರ ಭವಿಷ್ಯ ಹಾಗೂ ಸ್ಪೀಕರ್ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸಲಿರುವುದರಿಂದ ಐತಿಹಾಸಿಕವಾಗಲಿದ್ದು ರಾಷ್ಟ್ರ ರಾಜಕಾರಣದಲ್ಲೂ ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಬೆಳಿಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ತೀರ್ಪು ಬರುವ ಹಿನ್ನೆಲೆಯಲ್ಲಿ ಈಗಾಗಲೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ‌. ಸೋಮಶೇಖರ್, ಬಿ.ಸಿ. ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವನಾಥ್, ರೋಷನ್ ಬೇಗ್, ಆರ್. ಶಂಕರ್, ಶಿವರಾಂ ಹೆಬ್ಬಾರ್ ದೆಹಲಿಗೆ ಆಗಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಎಚ್. ವಿಶ್ವನಾಥ್, 'ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ನಮ್ಮ ಪರವಾಗಿ ಬರುತ್ತೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇವೆ' ಎಂದು ಭರವಸೆ ವ್ಯಕ್ತಪಡಿಸಿದರು.


ಇದಕ್ಕೂ ಮಿಗಿಲಾಗಿ ಬಹುತೇಕ ಅನರ್ಹ ಶಾಸಕರು ಉಪ ಚನಾವಣೆ ಎದುರಿಸಲು ಸಿದ್ಧರಿಲ್ಲ. ಅದರ ಬದಲು ದ ಮಾಜಿ ಸ್ಪೀಕರ್ ಆದೇಶವನ್ನು ಹಾಲಿ ಸ್ಪೀಕರ್ ಕಚೇರಿಯ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಕಳುಹಿಸಿಕೊಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಇಂಥ ಭರವಸೆಯಿಂದಾಗಿ 'ರಾಜ್ಯದಲ್ಲಿ ಉಪಚುನಾವಣೆ ನಡೆಯುವುದಿಲ್ಲ' ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಾರೆ. ಇವರ ನಿರೀಕ್ಷೆ ಸುಳ್ಳಾಗಿ ಬೇರೆ ಯಾವುದೇ ರೀತಿಯ ತೀರ್ಪು ಬಂದರೂ ರಾಜ್ಯದಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ.


ಈಗ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅನರ್ಹ ಶಾಸಕರ ದೃಷ್ಟಿಯಿಂದ ಮಾತ್ರವಲ್ಲ, ಸ್ಪೀಕರ್ ಕಾರ್ಯವ್ಯಾಪ್ತಿಯ ದೃಷ್ಟಿಯಿಂದಲೂ ದೇಶದ ಗಮನ ಸೆಳೆದಿದೆ. ಈ ಪ್ರಕರಣದಲ್ಲಿ ಸ್ಪೀಕರ್ ‘ಶಾಸಕರ ಅನರ್ಹತೆ ಅವಧಿ ಹಾಲಿ ವಿಧಾನಸಭೆ ಅವಧಿ ಅಂತ್ಯಗೊಳ್ಳುವ (2023) ತನಕ’ ಎಂದು‌ ಆದೇಶ ಮಾಡಿದ್ದರು. ಈ ರೀತಿ ಅವಧಿ ನಿರ್ಧಾರ ಮಾಡುವ ಅಧಿಕಾರ ಸ್ಪೀಕರ್​ಗಿಲ್ಲ ಎಂಬುದು ಅನರ್ಹ ಶಾಸಕರ ಪರ ವಕೀಲರ ಪ್ರಬಲವಾದ ವಾದ. ಈ ವಾದಕ್ಕೆ ಮನ್ನಣೆ ಸಿಗುತ್ತೊ ಇಲ್ಲವೊ ಎಂಬುದು ತೀರ್ಪಿನಲ್ಲಿ ಗೊತ್ತಾಗಲಿದೆ. ಈವರೆಗೆ ಅನರ್ಹತೆಗೊಳಿಸುವಾಗ ಅವದಿ ನಿಗದಿ ಮಾಡುವ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಈ ತೀರ್ಪು ಮಹತ್ವದ್ದಾಗಿದೆ.