ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ಆಸ್ಪತ್ರೆಗೆ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ನಿಯಮಗಳ ನೆಪದಲ್ಲಿ ಕಿರುಕುಳ ನೀಡಿದ ಪೊಲೀಸರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಂಡ್ಯದಲ್ಲಿ ಮಗುವಿನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ಪೊಲೀಸರು ಕಿರುಕುಳ ನೀಡಿದ್ದು ಖಂಡನೀಯ. ಮಾನವೀಯತೆಯನ್ನೇ ಅಣಕಿಸುವ ಇಂಥ ಘಟನೆಗಳು ರಾಜ್ಯದಲ್ಲಿ ಪದೇಪದೆ ಘಟಿಸುತ್ತಿರುವುದು ಆಘಾತಕಾರಿ ವಿಷಯ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ನಕಲಿ ಅಲೋಪತಿ ವೈದ್ಯರಿಗೆ ಶಾಕ್; ಮೂರು ಕ್ಲಿನಿಕ್ ಬಂದ್, ಮುಂದುವರೆದ ಆಪರೇಷನ್!!


ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ರಾಜ್ಯ ಬಿಜೆಪಿ ಸರಕಾರ ಹಾಳು ಮಾಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆಸ್ಪತ್ರೆಗೆ ಬೈಕ್‌ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ತಂದೆ-ತಾಯಿಯನ್ನು ಅಡ್ಡಗಟ್ಟಿ ಹೆಲ್ಮೆಟ್ ಇಲ್ಲ ಎನ್ನುವ ಕಾರಣಕ್ಕೆ ಬೈಕಿನ ಕೀ ಕಿತ್ತುಕೊಂಡು ಪೊಲೀಸರು ಕಿರುಕುಳ ನೀಡಿದ ಘಟನೆಯ ವಿಡಿಯೋ ತುಣುಕುಗಳನ್ನು ನೋಡಿ ನನಗೆ ಬಹಳ ಸಂಕಟವಾಯಿತು. ಮಗುವಿನ ಅನಾರೋಗ್ಯದಿಂದ ಆತಂಕಗೊಂಡಿದ್ದ ದಂಪತಿಯೊಂದಿಗೆ ಪೊಲೀಸರು ಹೀಗೆ ನಡೆದುಕೊಂಡಿದ್ದು ಅಕ್ಷಮ್ಯ ಮತ್ತು ಹೇಯ. "ದಮ್ಮಯ್ಯ, ನಮ್ಮಲ್ಲಿ ಹಣವಿಲ್ಲ, ದಯವಿಟ್ಟು ಬಿಟ್ಟುಬಿಡಿ" ಎಂದು ಬೇಡಿಕೊಂಡರೂ ಪೊಲೀಸರು ದಯೆ ತೋರಿಸಿಲ್ಲ. ದಂಡದ ಮಾತು ಹೇಳುತ್ತಲೇ ಪೊಲೀಸರು ಹಣಕ್ಕಾಗಿ ಪೀಡಿಸಿರುವುದು ಪೈಶಾಚಿಕ ನಡವಳಿಕೆ, ಇಲಾಖೆಯೇ ತಲೆ ತಗ್ಗಿಸುವಂತದ್ದು ಎಂದು ಅವರು ಕಿಡಿಕಾರಿದ್ದಾರೆ.


ಇದನ್ನೂ ಓದಿ: "ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು"


ಹಣವಿಲ್ಲದೇ ದಂಪತಿ ರಸ್ತೆಯಲ್ಲೇ ಪರದಾಡಿದ್ದಾರೆ. ಆ ಮಗುವಿನ ತಂದೆ ಹಣಕ್ಕಾಗಿ ಒದ್ದಾಡಿದ್ದಾರೆ, ಆ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ರಸ್ತೆ ನಡುವೆಯೇ ಮಡಿಲಲ್ಲಿಟ್ಟುಕೊಂಡು ಅನುಭವಿಸಿದ ವೇದನೆ ರಾಜ್ಯ ಬಿಜೆಪಿ ಸರಕಾರದ ಕೆಟ್ಟ ಆಡಳಿತಕ್ಕೆ ಹಿಡಿದ ಕನ್ನಡಿ, ಮನುಷ್ಯತ್ವ ಸತ್ತ ಸರಕಾರದ ಇನ್ನೊಂದು ಕರಾಳಮುಖ ಎನ್ನದೇ ವಿಧಿ ಇಲ್ಲ ಎಂದು ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ.


ಆ ಮಗುವಿನ ತಂದೆ ಕೊನೆಗೂ ಗೆಳೆಯರೊಬ್ಬರಿಂದ ಹಣ ಪಡೆದು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ದಂಡ ಕಟ್ಟಿದ ಮೇಲೆ ಪೊಲೀಸರು ಬೈಕ್ ಬಿಟ್ಟು ಕಳಿಸಿದ್ದಾರೆ.ಬದಲಿಗೆ ದಂಡದ ರಸೀತಿ ಕೊಟ್ಟು, ಆ ನಂತರ ದಂಡ ಕಟ್ಟಿ ಎಂದು ಪೊಲೀಸರು ಹೇಳಬಹುದಿತ್ತು. ಹಾಗೆ ಮಾಡದೇ ದಂಡಪ್ರಯೋಗದ ಹೆಸರಿನಲ್ಲಿ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಗೊಂಡ ಕುರುಬ ಮತ್ತು ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮನವಿ


ಕೂಡಲೇ ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ವಹಿಸಬೇಕು ಹಾಗೂ ಇಂಥ ಮನಃಸ್ಥಿತಿಯ ಪೊಲೀಸ್ ಸಿಬ್ಬಂದಿಯ ಮನಃಪರಿವರ್ತನೆ ಮಾಡಬೇಕು. ಹಿರಿಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಮುತುವರ್ಜಿ, ಎಚ್ಚರಿಕೆ ವಹಿಸಬೇಕು. ಅಲ್ಲದೆ; ಗೃಹ ಸಚಿವರು ಈ ಬಗ್ಗೆ ಜನರಿಗೆ ಉತ್ತರ ನೀಡಬೇಕಲ್ಲದೆ, ನೊಂದ ದಂಪತಿಗೆ ಸಾಂತ್ವನ ಹೇಳಲೇಬೇಕು. ಇಂಥ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡಲು ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.