ಹಲ್ಲೆ ಪ್ರಕರಣ: ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಜಾ
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ನಟ ದುನಿಯಾ ವಿಜಯ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಗೊಳಿಸಿದ್ದು, ವಿಜಿಗೆ ಜೈಲೇ ಗತಿಯಾಗಿದೆ.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಇದರಿಂದಾಗಿ ದುನಿಯಾ ವಿಜಯ್ ಸೇರಿದಂತೆ ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಈ ಬೆನ್ನಲ್ಲೇ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ಆದೇಶ ಪ್ರತಿಗಾಗಿ ಕಾಯುತ್ತಿರುವುದಾಗಿ ವಿಜಯ್ ಪರ ವಕೀಲ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ರಾತ್ರಿ ನಡೆದ ಜಗಳವೊಂದು ಘರ್ಷಣೆಗೆ ತಿರುಗಿತ್ತು. ಈ ಸಂಬಂಧ ಜಿಮ್ ಟ್ರೈನರ್ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ ಎನ್ನುವ ಯುವಕನನ್ನು ದುನಿಯಾ ವಿಜಿ ಮತ್ತು ಮೂವರು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾನುವಾರ ಬೆಳಿಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಯ್ ಮತ್ತು ಅವರ ಸ್ನೇಹಿತರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ಕೋರ್ಟಿಗೆ ರಜೆಯಿದ್ದ ಕಾರಣ ಕೋರಮಂಗಲ NGVನಲ್ಲಿರುವ ನ್ಯಾಯಮೂರ್ತಿ ಮಹೇಶ್ ಬಾಬು ಅವರ ಎದುರು ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು ವಿಜಯ್ ಮತ್ತು ಇನ್ನಿತರ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದರು. ಈ ಬೆನ್ನಲೇ ಜಾಮೀನು ನೀಡುವಂತೆ ವಿಜಯ್ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಮಹೇಶ್ ಬಾಬು ಸೆಪ್ಟೆಂಬರ್ 26ಕ್ಕೆ ಆದೇಶವನ್ನು ಕಾಯ್ದಿರಿಸಿದ್ದರು.