ಬೆಂಗಳೂರು: ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಒಟ್ಟು ಐದು ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಒಟ್ಟು 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 


COMMERCIAL BREAK
SCROLL TO CONTINUE READING

ಎರಡು ವಿಧಾನಸಭಾ ಕ್ಷೇತ್ರ
ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ನ್ಯಾಮೇಗೌಡ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಇನ್ನು, ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಕೇವಲ ಎರಡು ದಿನಗಳ ಹಿಂದಷ್ಟೇ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳಿದ್ದರೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಗೆಲುವು ನಿರಾಯಾಸವಾಗಲಿದೆ ಎನ್ನಲಾಗುತ್ತಿದೆ. ರಾಮನಗರದಲ್ಲಿ ಒಟ್ಟು 1502 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 


ಮೂರು ಲೋಕಸಭಾ ಕ್ಷೇತ್ರ
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಸಹೋದರಿ ಜಿ. ಶಾಂತಾ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಉಗ್ರಪ್ಪ ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಅಭ್ಯರ್ಥಿಯಾಗಿ ಮಧುಬಂಗಾರಪ್ಪ, ಬಿಜೆಪಿಯ ಬಿ.ವೈ.ರಾಘವೇಂದ್ರ, ಜೆಡಿಯುನ ಮಹಿಮಾ ಪಟೇಲ್ ಸೇರಿದಂತೆ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ಸೇರಿದಂತೆ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 


ಶಿವಮೊಗ್ಗ ಲೋಕಸಭಾ ಕ್ಷೇತ್ರ 2,002 ಮತಗಟ್ಟೆಗಳು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 2,047 ಮತಗಟ್ಟೆಗಳು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1,901 ಮತಗಟ್ಟೆಗಳಿವೆ. ಈ ಉಪ ಚುನಾವಣೆಯ ಮತಎಣಿಕೆ ನವೆಂಬರ್ 6 ರಂದು ನಡೆಯಲಿದೆ.