ಧಾರವಾಡದಲ್ಲಿ ಹೆಚ್ಚುತ್ತಿದೆ ಜಾನುವಾರುಗಳ ಸಾವು! ಆತಂಕದಲ್ಲಿ ರೈತ ಸಮೂಹ
ಜಾನುವಾರು ಕುಲಕ್ಕೆ ಚರ್ಮಗಂಟು ರೋಗ ಎಂಬ ಮಹಾಮಾರಿ ಬಂದು ಅಪ್ಪಳಿಸಿದೆ. ಈ ರೋಗದಿಂದ ಜಾನುವಾರುಗಳು ಅಕ್ಷರಶಃ ಒದ್ದಾಡುತ್ತಿವೆ.
ಧಾರವಾಡ : ಸದಾ ಒಂದಲ್ಲೊಂದು ವಿಷಯದಲ್ಲಿ ಸಂಕಷ್ಟದಲ್ಲಿರುವ ರೈತ ಸಮೂಹಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಇದೀಗ ಜಾನುವಾರಿಗಳನ್ನು ಕಾಡುತ್ತಿರುವ ಚರ್ಮಗಂಟು ರೋಗ ರೈತರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾನುವಾರುಗಳನ್ನು ತಂದ ರೈತರು ಈ ರೋಗದಿಂದ ಅವುಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಕೊರೊನಾ ಎಂಬ ಮಹಾಮಾರಿ ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸಿತ್ತು. ಈ ಸೋಂಕು ಹಬ್ಬಿ ಇಡೀ ವಿಶ್ವವೇ ನಡುಗುವಂತೆ ಮಾಡಿತ್ತು. ಈಗ ಅದೇ ರೀತಿ ಜಾನುವಾರು ಕುಲಕ್ಕೆ ಚರ್ಮಗಂಟು ರೋಗ ಎಂಬ ಮಹಾಮಾರಿ ಬಂದು ಅಪ್ಪಳಿಸಿದೆ. ಈ ರೋಗದಿಂದ ಜಾನುವಾರುಗಳು ಅಕ್ಷರಶಃ ಒದ್ದಾಡುತ್ತಿವೆ.
ಇದನ್ನೂ ಓದಿ : "ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ"
ಧಾರವಾಡ ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗುತ್ತಿದ್ದು, ಇದುವರೆಗೂ 288 ಜಾನುವಾರುಗಳು ಅಸುನೀಗಿವೆ. ಈ ರೋಗಕ್ಕೆ ನಿಖರವಾದ ಔಷಧಿ ಇಲ್ಲದಿದ್ದರೂ ಕುರಿಗೆ ಬರುವ ಸಿಡುಬು ರೋಗದ ಲಸಿಕೆಯನ್ನೇ ಜಾನುವಾರುಗಳಿಗೆ ಕೊಡಲಾಗುತ್ತಿದೆ. ಧಾರವಾಡ ತಾಲೂಕಿನಲ್ಲಿ 42, ಹುಬ್ಬಳ್ಳಿ ತಾಲೂಕಿನಲ್ಲಿ 79, ಕಲಘಟಗಿ ತಾಲೂಕಿನಲ್ಲಿ 27, ಕುಂದಗೋಳ ತಾಲೂಕಿನಲ್ಲಿ 66 ಹಾಗೂ ನವಲಗುಂದ ತಾಲೂಕಿನಲ್ಲಿ 74 ಜಾನುವಾರುಗಳು ಪ್ರಾಣ ಬಿಟ್ಟಿವೆ.
ಇನ್ನು ಈ ರೋಗವನ್ನು ನಿಯಂತ್ರಣ ಮಾಡುವುದಕ್ಕೆ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಕೂಡ ಇದೆ. ಸುಮಾರು 600 ಜನ ಸಿಬ್ಬಂದಿ ಇಲಾಖೆಗೆ ಸದ್ಯದ ಅವಶ್ಯಕತೆ ಇದೆ. ಧಾರವಾಡ ಜಿಲ್ಲೆಗೆ 78 ಜನ ವೈದ್ಯರು ಸರ್ಕಾರದಿಂದಲೇ ನೇಮಕವಾಗಿದ್ದರು. ಆದರೆ, ಇದರಲ್ಲಿ 48 ಜನ ವೈದ್ಯರು ಮಾತ್ರ ಇದೀಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊನ್ನೆ ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ 8 ರಾಸುಗಳು ಈ ರೋಗಕ್ಕೆ ತುತ್ತಾಗಿವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಈ ರೋಗ ತೀವ್ರವಾಗಿ ಹಬ್ಬುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ : ಸುಪ್ರೀಂ ಎದುರು ನಮ್ಮ ವಾದ ಮಂಡಿಸಲು ಸಿದ್ಧತೆ: ಸಿಎಂ ಬೊಮ್ಮಾಯಿ
ಇದಕ್ಕೆ ಸಂಬಂದಿಸಿದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿ ಉಮೇಶ ಅವರನ್ನು ಕೇಳಿದರೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಆದರೆ, ತುರ್ತಾಗಿ ಎಲ್ಲಾ ಜಾನುವಾರುಗಳಿಗೂ ಲಸಿಕೆ ನೀಡುತ್ತಿದ್ದೇವೆ. ಈಗಾಗಲೇ ಸಾಕಷ್ಟು ಲಸಿಕೆ ಸಂಗ್ರಹ ಕೂಡ ಮಾಡಿಟ್ಟುಕೊಂಡಿದ್ದೇವೆ. ಪಕ್ಕದ ಜಿಲ್ಲೆಗಳಿಂದಲೇ ನಮ್ಮ ಜಿಲ್ಲೆಯ ಜಾನುವಾರುಗಳಿಗೆ ಈ ರೋಗ ಹಬ್ಬಿದೆ ಎನ್ನುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.