ವಿದ್ಯಾರ್ಥಿಗಳೇನ್ ಲ್ಯಾಪ್ಟ್ಯಾಪ್ಗಳ್ನ ಮನೇಲಿಟ್ಕೊಂಡ್ ಪೂಜೆ ಮಾಡ್ಬೇಕಾ?
ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ನಿರ್ಬಂಧಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳು ಇನ್ಮುಂದೆ ಕಾಲೇಜಿನಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟ್ಯಾಪ್ಗಳನ್ನು ಬಳಸಬಾರದು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಶಾಸಕ ಸಿ.ಟಿ.ರವಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಲ್ಯಾಪ್ ಟಾಪ್, ಮೊಬೈಲ್ ನಿರ್ಬಂಧಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸರ್ಕಾರವೇ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಿ, ಇದೀಗ ಅದರ ಬಳಕೆಗೆ ಸರ್ಕಾರವೇ ನಿರ್ಬಂಧ ಹೇರಿರುವುದು ಎಷ್ಟರಮಟ್ಟಿಗೆ ಸರಿ? ಹಾಗಾದ್ರೆ ವಿದ್ಯಾರ್ಥಿಗಳೇನು ಲ್ಯಾಪ್ ಟ್ಯಾಪ್ಗಳನ್ನು ಮನೇಲಿಟ್ಕೊಂಡು ಊದುಬತ್ತಿ ಹಚ್ಚಿ ಪೂಜೆ ಮಾಡ್ಬೇಕಾ? ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅವಶ್ಯಕತೆ ಇರುತ್ತದೆ. ಹಾಗಾಗಿ ಸರ್ಕಾರದ ಈ ನಿರ್ಧಾರ ನಿಜಕ್ಕೂ ಹಾಸ್ಯಾಸ್ಪದ ಎಂದು ಸಿ.ಟಿ.ರವಿ ಟೀಕಿಸಿದರು.
ಸಮ್ಮಿಶ್ರ ಸರ್ಕಾರ ಅರ್ಧ ವರ್ಷ ಪೂರ್ಣಗೊಳಿಸಿದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿಲ್ಲ. ಕೇವಲ ರಾಜಕೀಯ ವ್ಯವಹಾರ ನಡೆಸುತ್ತಿದೆ. ಹೊಂದಾಣಿಕೆ ರಾಜಕೀಯಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಹಿತಾಸಕ್ತಿ ಬಲಿ ಕೊಡುತ್ತಿವೆ. ಆದ್ದರಿಂದ ಸರ್ಕಾರ ಈಡೇರಿಸಬೇಕಾದ ಭರವಸೆಗಳ ಬಗ್ಗೆ ಈ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.