ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ 15 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆದರೂ ತಮ್ಮ ಸಂಖ್ಯಾಬಲ ತೋರಿಸುತ್ತೇವೆ ಎನ್ನುತ್ತಿದ್ದಾರೆ ದೋಸ್ತಿ ನಾಯಕರು. ಗುರುವಾರದಿಂದಲೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ವಿಶ್ವಾಸ ಮತ ಯಾಚನೆ ಮಾಡುತ್ತಾರೆ, ನಾಳೆ ಮಾಡುತ್ತಾರೆ ಎಂದು ಸದನದಲ್ಲಿ ಸಂಯಮದಿಂದಲೇ ಕಾಯುತ್ತಿರುವ ಬಿಜೆಪಿ ಶಾಸಕರು ಇದೀಗ ಟ್ವೀಟ್ ಮೂಲಕ ಮಾತನಾಡಲು ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

#ನುಡಿದಂತೆನಡೆಯಿರಿ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಸಿ.ಟಿ. ರವಿ, ರಾಮಾಯಣ ಆಯ್ತು, ಮಹಾಭಾರತವೂ ಮುಗಿಯಿತು, ವೇದ ಉಪನಿಷತ್ ಹೇಳಿದ್ದು ಆಯ್ತು. ಇವತ್ತೇನು ಗರುಡ ಪುರಾಣವೇ ? ? ? ಎಂದಿದ್ದಾರೆ.



ಸಮ್ಮಿಶ್ರ ಸರ್ಕಾರದ ಲೋಕೋಪಯೋಗಿ ಜ್ಯೋತಿಷಿ "ಇಂದು ಮಂಗಳವಾರ" ಎಂದು ಆಗಲೇ ರಾಗ ಎಳೆಯತೊಡಗಿದ್ದಾರಂತೆ.‌ ಪೀಠಿಕೆ ಚೆನ್ನಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಶಾಸಕ ಸುರೇಶ್ ಕುಮಾರ್ ದಳಪತಿಗಳ ಕಾಲೆಳೆದಿದ್ದಾರೆ.



ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ಇಂದು 10.05 ಗಂಟೆಗೆ ಸದನ ಪ್ರಾರಂಭವಾದಾಗ ವಿಶ್ವಾಸ ಮತ ಕೇಳಿದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪರ ಆಡಳಿತ ಪಕ್ಷಗಳಿಂದ ಹಾಜರಿದ್ದದ್ದು ಕೇವಲ 4 ಸದಸ್ಯರು ಎಂದು ಮತ್ತೊಂದು ಟ್ವೀಟ್ ಮಾಡಿ ಮೈತ್ರಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.



ಕಳೆದ ಗುರುವಾರವೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡುತ್ತಾರೆ ಎಂದು ಎಲ್ಲರೂ ಕಾದುಕುಳಿತಿದ್ದರು. ಆದರೆ 'ವಿಪ್' ಎಂಬ ಬ್ರಹ್ಮಾಸ್ತ್ರ ಬಳಸಿದ್ದ ಮೈತ್ರಿ ನಾಯಕರು ಅಂದು ಮತ ಯಾಚನೆ ಮಾಡಲಿಲ್ಲ. 


"ವಿಶ್ವಾಸ ಮತ ಯಾಚನೆ ನಡೆಯದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಈ ಮೈತ್ರಿ ಸರ್ಕಾರವು ಬಹುಮತವನ್ನು ಕಳೆದುಕೊಂಡಿದೆ. ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ತಿಳಿಸಿದ್ದ ಮುಖ್ಯಮಂತ್ರಿಗಳು ಇಂದು(ಗುರುವಾರ) ವಿಪ್ ನೆಪ ಒಡ್ಡುತ್ತಿದ್ದಾರೆ. ರಾಜ್ಯಪಾಲರ ಸೂಚನೆಯನ್ನು ಸ್ಪೀಕರ್ ಪಾಲಿಸಲಿಲ್ಲ. ಆದರೆ ವಿಶ್ವಾಸಮತ ಯಾಚನೆ ಆಗುವವರೆಗೂ ನಾವು ಸದನದಲ್ಲೇ ಇರುತ್ತೇವೆ. ವಿಶ್ವಾಸ ಮತಯಾಚನೆಯಾಗುವವರೆಗೂ ತಾವು ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತೇವೆ" ಎಂದು ಸದನದಲ್ಲೇ ಬೀಡುಬಿಟ್ಟರು. 


ಶುಕ್ರವಾರವೂ ಕೂಡ ಬಿಜೆಪಿ ನಾಯಕರು ಕಾದು-ಕಾದು ಸುಸ್ತಾದರು. ರಾಜ್ಯಪಾಲ ವಜುಭಾಯಿ ವಾಲ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಶ್ವಾಸ ಮತ ಸಾಬೀತು ಪಡಿಸಲು ಎರಡು ಬಾರಿ ಗಡುವು ನೀಡಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ.


ಇದಾದ ಬಳಿಕ ಸೋಮವಾರ ಎಷ್ಟೊತ್ತಾದರೂ ವಿಶ್ವಾಸ ಮತ ಮುಗಿಸಿಯೇ ತೆರಳಬೇಕು ಎಂದು ಸ್ಪೀಕರ್ ಆದೇಶಿಸಿದ್ದರು. ಸೋಮವಾರ ರಾತ್ರಿ 11:57ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರೂ ಕೂಡ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.