ಡಿ.ಜೆ. ಹಳ್ಳಿ ಗಲಭೆ ಖಂಡನೀಯ, ಸರ್ಕಾರ ಕಾನೂನಿನ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್
ಡಿ.ಜೆ. ಹಳ್ಳಿ ಘಟನೆಯ ಹಿಂದೆ ಬಹಳ ವ್ಯವಸ್ಥಿತವಾದ ಸಂಚು ಇದೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಲಿದ್ದು, ಸರ್ಕಾರ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡರು ಯಾವುದೇ ಅಭ್ಯಂತರವಿಲ್ಲ. ನಾವು ಸಹಕಾರ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು: ಡಿ.ಜೆ. ಹಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಬೆಂಗಳೂರಿನ ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.
ಸಿ.ಟಿ. ರವಿ (CT Ravi) ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ‘ಈ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬಾರದು. ಅವರು ಅವರ ರಾಜಕಾರಣ ಮಾಡಲಿ. ನಾನು ಯಾರಿಗೂ ಉತ್ತರ ಕೊಡುವುದಿಲ್ಲ. ನಾನು ಕೂಡ ಶಾಸಕರ ಜತೆ ಚರ್ಚಿಸುತ್ತೇನೆ. ಸ್ಥಳಕ್ಕೆ ಹೋಗಿ ನೋಡಬೇಕಿದೆ. ಶಾಸಕರ ಮನೆಗೂ ಭೇಟಿ ನೀಡಬೇಕು. ಈಗಾಗಲೇ ವಿರೋಧ ಪಕ್ಷದ ನಾಯಕರ ಜತೆ ಮಾತನಾಡಿದ್ದೇನೆ’ ಎಂದರು.