ರಾಜಕೀಯ ಬಿಕ್ಕಟ್ಟಿನ ನಡುವೆ ದೇವಗೌಡರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿನ 11 ಶಾಸಕರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಈ ವಿಚಾರವಾಗಿ ಚರ್ಚಿಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಬೆಂಗಳೂರು: ರಾಜ್ಯದಲ್ಲಿನ 11 ಶಾಸಕರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಈ ವಿಚಾರವಾಗಿ ಚರ್ಚಿಸಲು ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಈಗ ಶಾಸಕರು ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಸೃಷ್ಟಿ ಮಾಡಿದೆ. ಈ ಹಿನ್ನಲೆಯಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಪ್ರಸ್ತಾಪವನ್ನು ಡಿಕೆಶಿ ದೇವೇಗೌಡರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆಗೆ ಈ ರಾಜಕೀಯ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಯಡಿಯೂರಪ್ಪ ಅವರು,"ನಾನು ತುಮಕೂರಿಗೆ ಹೋಗುತ್ತಿದ್ದೇನೆ ಮತ್ತು ಸಂಜೆ 4 ಗಂಟೆಗೆ ಹಿಂತಿರುಗುತ್ತೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದಿದೆ. ಈ ವಿಚಾರವಾಗಿ ಕಾಯ್ದು ನೋಡುತ್ತೇವೆ ಎಂದು ಹೇಳಿದ್ದಾರೆ.
ಶನಿವಾರದಂದು ಜೆಡಿ (ಎಸ್) ಶಾಸಕ ಎಚ್ ವಿಶ್ವನಾಥ್ ಸೇರಿದಂತೆ 11 ಶಾಸಕರು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿದ್ದಾರೆ ಮತ್ತು ಅವುಗಳನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ .ಆದರೆ, ಸ್ಪೀಕರ್ ಇನ್ನೂ ಈ ರಾಜೀನಾಮೆಗಳನ್ನು ಸ್ವೀಕರಿಸಿಲ್ಲ ಎನ್ನಲಾಗಿದೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರಲ್ಲಿ ಬಿ.ಸಿ.ಪಾಟೀಲ್, ಎಚ್ ವಿಶ್ವನಾಥ್, ನಾರಾಯಣ್ ಗೌಡ, ಎಸ್ ಹೆಬ್ಬಾರ್, ಮಹೇಶ್ ಕುಮತಳ್ಳಿ, ಗೋಪಾಲಯ, ರಮೇಶ್ ಜಾರ್ಕಿಹೋಳಿ, ಮತ್ತು ಪ್ರತಾಪ್ ಗೌಡ ಪಾಟೀಲ್ ಸೇರಿದ್ದಾರೆ.ಇವರು ಈಗ ಮುಂಬೈನ ಸೋಫಿಟೆಲ್ ಹೋಟೆಲ್ನಲ್ಲಿ ತಂಗಿದ್ದಾರೆ ಎನ್ನಲಾಗಿದೆ.