ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ (DK Shivakumar) ಕವನವೊಂದನ್ನು ವಾಚನ ಮಾಡಿ ಸರ್ಕಾರದ ಸಾಧನೆ ಬಗ್ಗೆ ವ್ಯಂಗವಾಡಿದ್ದಾರೆ.

COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ   ಬಿ.ಎಸ್. ಯಡಿಯೂರಪ್ಪ (BS Yediyurappa)ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷವನ್ನು ಹೇಗೆ ಪೂರೈಸಿತು ಎಂದು ಡಿ.ಕೆ. ಶಿವಕುಮಾರ್ ಈ ರೀತಿ ಕವನವನ್ನಾಗಿ‌ ರಚಿಸಿದ್ದಾರೆ.


ಒಂದನೇ ತಿಂಗಳು 
ಮಂತ್ರಿಮಂಡಲ ಇಲ್ಲದೆ ತಿರುಗಾಟ
ಎರಡನೇ ತಿಂಗಳು 
ನೆರೆ ಪರಿಹಾರ ಕೊಡದೆ ನರಳಾಟ
ಮೂರನೇ ತಿಂಗಳು 
ಉಪಚುನಾವಣೆ ಎಂಬ  ಬಯಲಾಟ
ನಾಲ್ಕನೇ ತಿಂಗಳು
ಮಂತ್ರಿ ಮಂಡಲ ಎಂಬ ದೊಂಬರಾಟ
ಐದು, ಆರರಲ್ಲಿ 
ಮಂತ್ರಿಗಿರಿಗಾಗಿ ಕಿತ್ತಾಟ
ಏಳು, ಎಂಟು
ತಿಂಗಳಲ್ಲಿ ಕೋರೊನಾ ಲಾಕ್ ಡೌನ್ ಎಂಬ ಹೊರಳಾಟ
ಒಂಬತ್ತು, ಹತ್ತು ತಿಂಗಳಲ್ಲಿ
ಕೋರೋನಾ ಕೋರೋನಾ ಎಂಬ ಕಿರುಚಾಟ
ಹನ್ನೊಂದು, ಹನ್ನೆರಡನೇ ತಿಂಗಳು "ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ"


ಹೀಗೆ ಕವನದ ಮೂಲಕ ತಿರುಗೇಟು ನೀಡಿರುವ ಡಿ.ಕೆ.‌ ಶಿವಕುಮಾರ್, ರಾಜ್ಯ ಬಿಜೆಪಿ ಸರ್ಕಾರದ್ದು ಬರೀ ಸುಳ್ಳಿನ ಸರಮಾಲೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಕಿವಿಗೆ ಇಂಪಾದ ಮಾತುಗಳನ್ನು ಹೇಳಿದ್ದಾರೆ. ಆದರೆ‌ ವಾಸ್ತವದಲ್ಲಿ ಹಾಗೆ ಮಾಡಿಲ್ಲ. ನೆರೆ ನಿಭಾಯಿಸುವಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ. ಇದುವರೆಗೂ ನೆರೆಗೆ ತುತ್ತಾಗಿರುವವರಿಗೆ ಮನೆ ಕೊಟ್ಟಿಲ್ಲ.‌ ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.


ಯಡಿಯೂರಪ್ಪ ನಾಯಕತ್ವ ಕೊಂಡಾಡಿದ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ


ಪ್ರವಾಹದ ಹಾನಿ ಸುಮಾರು 30 ಸಾವಿರ ಕೋಟಿ ಆಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು ಎಷ್ಟು? ಅಮಿತ್ ಶಾ ಬಳಿ 5 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಹತ್ತೇ ನಿಮಿಷಗಳಲ್ಲಿ ಯಡಿಯೂರಪ್ಪ, ಅಮಿತ್ ಶಾ ಭೇಟಿ ಮುಕ್ತಾಯವಾಯಿತು. ಕೊರೊನ ಸಂಧರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಸಹ ಕೊಡಲಿಲ್ಲ. ರೈತರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ರೈತರಿಗೆ ಕೊಟ್ಟ ಪರಿಹಾರದ ಬಗ್ಗೆ ಪತ್ರ ಬಿಡುಗಡೆ ಮಾಡಿ. ಶ್ವೇತಪತ್ರ ಬಿಡುಗಡೆ ಮಾಡಿ ಅಂತ ಕೇಳಿದ್ರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.


ನಿಮ್ಮ ಭ್ರಷ್ಟಾಚಾರಕ್ಕೆ ಬೆಂಬಲ ಕೊಡಬೇಕಾ? ಹಿಂದಿನ ನಮ್ಮ ಸರ್ಕಾರವನ್ನು ಶೇಕಡಾ10 ಸರ್ಕಾರ ಅಂತ ಟೀಕೆ ಮಾಡುತ್ತಿದ್ದಿರಿ. ಈಗ ನೂರಾರು ಪಟ್ಟು ಜಾಸ್ತಿ ಹಣ ಕೊಟ್ಟು ವೈದ್ಯಕೀಯ ಉಪಕರಣಗಳನ್ನ ಖರೀದಿ ಮಾಡಿದ್ದೀರಿ. ಇದನ್ನು ತನಿಖೆಗೆ ಕೊಡಿ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದನ್ನೂ ತನಿಖೆ ನಡೆಸಿ ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.


ಪಿಂಚಣಿ ಹಣ ಬಿಡುಗಡೆ ಮಾಡದೇ ಇದ್ದುದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ: ಕುಮಾರಸ್ವಾಮಿ


1,600 ಕೋಟಿ ರೂಪಾಯಿ ಮೌಲ್ಯದ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಯಾರಿಗೆ  ಎಷ್ಟು ಕೊಟ್ಟಿದ್ದೀರಾ ಎನ್ನುವ ಮಾಹಿತಿ ಬಿಡುಗಡೆ ಮಾಡಲಿ.‌ ಕೊರೊನಾ ಸಂದರ್ಭದಲ್ಲಿ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ‌ನಡೆದಿದೆ. ಶೇಖಡ 200ರಿಂದ 300ರಷ್ಟು ಭ್ರಷ್ಟಾಚಾರ ಆಗಿದೆ ಎಂದರು.


ಒಂದು ಮಾಸ್ಕ್ ಗೆ 251 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. N 95 ಬ್ರಾಂಡಿನ 10 ಲಕ್ಷ ಮಾಸ್ಕ್ ಖರೀದಿ ಮಾಡಿದ್ದಾರೆ. ಈ ಭ್ರಷ್ಟಾಚಾರಕ್ಕೆ ನಾವು ನಿಮ್ಗೆ ಸಹಕಾರ ಕೊಡಬೇಕಾ? ಎಂದು ಪ್ರಶ್ನಿಸಿದರು.