ಶಿಕ್ಷಣ ನೀತಿ ಜಾರಿಗೆ ಶ್ರೀಗಳ ಮಾರ್ಗದರ್ಶನಕ್ಕೆ ಮೊರೆಹೋದ ಡಿಸಿಎಂ ಅಶ್ವಥನಾರಾಯಣ್
ಒಂದೆಡೆ ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗಲೇ, ಸುತ್ತೂರು ಮಠವು ಈ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದೆ.
ಮೈಸೂರು: ಇಡೀ ದೇಶ ಹಾಗೂ ರಾಜ್ಯದ ದಿಕ್ಸೂಚಿಯನ್ನೇ ಬದಲಿಸಬಲ್ಲ ಶಕ್ತಿ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ನಾಡಿನ ಎಲ್ಲಾ ಮಹಾಸ್ವಾಮಿಗಳು ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿ ಈ ಮಹತ್ಕಾರ್ಯದಲ್ಲಿ ಸರ್ಕಾರದ ಕೈಹಿಡಿದು ಮುನ್ನಡೆಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಮನವಿ ಮಾಡಿದರು.
ಸುತ್ತೂರು ಮಹಾಸಂಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಗದ್ಗುರು ಶ್ರೀ ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 105ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ 'ಪ್ರಸಾದ' ಮಾಸಪತ್ರಿಕೆಯನ್ನು ವರ್ಚುವಲ್ ವೇದಿಕೆ ಮೂಲಕ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಶಿಕ್ಷಣ ನೀತಿ (Education Policy)ಯನ್ನು ಮೊತ್ತ ಮೊದಲಿಗೆ ರಾಜ್ಯದಲ್ಲಿ ಜಾರಿ ಮಾಡಲು ಸರಕಾರ ಹೆಜ್ಜೆಗಳನ್ನು ಇಡುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು, ಜಾಗತಿಕ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನು ರೂಪಿಸಬೇಕು ಎಂಬ ನಿಟ್ಟಿನಲ್ಲಿ ನೀತಿಯಲ್ಲಿ ಅಡಕವಾಗಿರುವ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಅಗತ್ಯವಿದೆ ಎಂದು ಹೇಳಿದರು.
ಒಂದೆಡೆ ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗಲೇ, ಸುತ್ತೂರು ಮಠವು ಈ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದೆ. ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಉನ್ನತ ಸಾಧನೆ ಮಾಡಿದೆ ಎಂದು ಹೇಳಿದ ಅವರು, ಅತ್ಯಂತ ಪ್ರಾಚೀನವಾದ ಶ್ರೀಮಠವು ಶಿಕ್ಷಣದಲ್ಲಂತೂ ಜಗತ್ತೇ ಗಮನ ಸೆಳೆಯುವಂಥ ಕೆಲಸ ಮಾಡಿದೆ ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ ಈ ಕಾರ್ಯಕ್ರಮವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ವರ್ಚುವಲ್ ವೇದಿಕೆ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮುಂತಾದವರು ಹಾಜರಿದ್ದರು.