ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
Channapatna bypoll: ಎಚ್.ಡಿ.ಕುಮಾರಸ್ವಾಮಿ ಅವರು ಯಾವುದಾದರೂ ಒಂದು ದೇವಾಲಯಕ್ಕೆ ಸಹಾಯ ಮಾಡಿದ್ದಾರಾ? ಸಮುದಾಯ ಭವನ ನಿರ್ಮಿಸಿದ್ದಾರಾ? ಸ್ಮಶಾನಕ್ಕೆ ಜಮೀನು ಕೊಡಿಸಿದ್ದಾರಾ? ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರಾ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
Channapatna bypoll: "ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಎಂಟೂವರೆ ವರ್ಷಗಳ ಕಾಲ ಯಾರೂ ಅಲುಗಾಡಿಸಲು ಆಗುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಜನ್ಮ ಎತ್ತಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲೆ ತೋಟದ ಹಳ್ಳಿ, ಅಕ್ಕೂರು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಚುನಾವಣೆಗೆ ನಾಲ್ಕೈದು ದಿನವಿರುವಾಗ ಜನರ ಬಳಿಗೆ ಬರುವ ಕುಮಾರಸ್ವಾಮಿ ಅವರೇ ನಿಮ್ಮ ಈ ಧೋರಣೆಯನ್ನು ಇನ್ನೆಷ್ಟು ದಿನ ಮುಂದುವರಿಸಿಕೊಂಡು ಹೋಗುತ್ತೀರಿ" ಎಂದು ಇದೇ ವೇಳೆ ಪ್ರಶ್ನಿಸಿದರು.
ಕುಮಾರಸ್ವಾಮಿ ಸಹವಾಸ ಸಾಕಾಗಿದೆ!
"18 ಸೀಟು ಇಟ್ಟುಕೊಂಡು ಸರ್ಕಾರ ಮಾಡಲು ಸಾಧ್ಯವೇ? ಬಿಜೆಪಿಯವರು ದಡ್ಡರು, ಕೇವಲ ಎರಡು ಕ್ಷೇತ್ರ ಗೆದ್ದಿರುವುದಕ್ಕೆ ಕೇಂದ್ರದಲ್ಲಿ ಕುಮಾರಸ್ವಾಮಿಯನ್ನು ಮಂತ್ರಿ ಮಾಡಿದ್ದಾರೆ. ಕಾಂಗ್ರೆಸ್‌ನವರಾಗಿದ್ದರೆ ಅವರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈ ಹಿಂದೆ ಅವರ ಸಹವಾಸ ಮಾಡಿ ಅನುಭವಿಸಿದ್ದು ಸಾಕಾಗಿದೆ. ಚುನಾವಣೆ ಸಮೀಪಿಸಲಿ ಆಗ ಆ ಬಗ್ಗೆ ಮಾತನಾಡುತ್ತೇನೆ" ಎಂದು ಡಿಕೆಶಿ ಕಿಡಿಕಾರಿದರು.
ನಾವು ಚನ್ನಪಟ್ಟಣದ ಜನರ ಕಾಳಜಿ ಮಾಡುತ್ತೇವೆ
"ರಾಮನಗರದಿಂದ ಕುಮಾರಸ್ವಾಮಿ ಅವರು ಶಾಸಕರು, ಮುಖ್ಯಮಂತ್ರಿ, ಸಂಸದರಾಗಿದ್ದರು. ಅವರ ತಂದೆ ಅದೇ ಕ್ಷೇತ್ರದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದರು. ಅವರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಏಕೆ ಸೋಲುತ್ತಿದ್ದರು? ಇನ್ನೆಷ್ಟು ದಿನ ಈ ರಾಮನಗರ ಹಾಗೂ ಚನ್ನಪಟ್ಟಣ ಜನರಿಗೆ ಟೋಪಿ ಹಾಕಲು ಸಾಧ್ಯವೆಂದು ಕುಮಾರಸ್ವಾಮಿ ಅವರು ಈಗ ಮಂಡ್ಯಕ್ಕೆ ಹೋಗಿದ್ದಾರೆ? ನೀವು ಮಂಡ್ಯಕ್ಕೆ ಹೋಗಿ, ನಮ್ಮ ಅಭ್ಯಂತರವಿಲ್ಲ. ಚನ್ನಪಟ್ಟಣದ ಜನರ ಕಾಳಜಿ ನಾವು ಮಾಡುತ್ತೇವೆ" ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: ವಕ್ಫ್ ಅಧಿಕಾರಿಗಳು ಬಂದರೆ ಜಮೀನಿಗೆ ಕಾಲಿಡಲು ಬಿಡಬೇಡಿ, ನೋಟಿಸ್ ಬಂದರೆ ಬಿಜೆಪಿಗೆ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ
ಕಾಂಗ್ರೆಸ್ ಪಕ್ಷವೇ ಲೇಸು!
"ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ʼಕೈʼ ಅಧಿಕಾರದಲ್ಲಿದ್ದರೆ ಚೆಂದ. ಇದನ್ನು ಸಿ.ಪಿ.ಯೋಗೇಶ್ವರ್ ಅವರು ಅರಿತುಕೊಂಡು ಕಾಂಗ್ರೆಸ್ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಸೇರಿದರೆ ಮಾತ್ರ ಜನರಿಗೆ ಸಹಾಯ ಮಾಡಲು ಸಾಧ್ಯವೆಂದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯೋಗೇಶ್ವರ್ ಎಲ್ಲಾ ಪಕ್ಷವನ್ನು ನೋಡಿದ್ದಾರೆ. ಬಿಜೆಪಿ ನೋಡಿದ್ದಾರೆ, ಜೆಡಿಎಸ್ ಜೊತೆಗಿನ ಮೈತ್ರಿ ನೋಡಿದ್ದಾರೆ. ಕೊನೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವೇ ಲೇಸು ಎಂದು ವಾಪಸ್ ಬಂದಿದ್ದಾರೆ" ಎಂದರು.
ಕುಮಾರಸ್ವಾಮಿ ದುಡ್ಡು ಬೇಡ ಎನ್ನಬೇಡಿ
"ಕೇವಲ ಸಿ.ಪಿ.ಯೋಗೇಶ್ವರ್ ಒಬ್ಬರೇ ಈ ಕ್ಷೇತ್ರದ ಜನರ ಸೇವೆ ಮಾಡುವುದಿಲ್ಲ. ನಾನು, ಸಿದ್ದರಾಮಯ್ಯ ಅವರಾದಿಯಾಗಿ ಎಲ್ಲಾ ಸಚಿವರು ಹಾಗೂ ಮುಖಂಡರು ನಿಮ್ಮ ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ದುಡ್ಡು ಕೊಡುತ್ತಾರಂತೆ. ಅವರ ದುಡ್ಡನ್ನು ನೀವು ಬೇಡ ಎನ್ನಬೇಡಿ. ಅವರ ಬಳಿ ಹಣ ಪಡೆಯಿರಿ, ಮತವನ್ನು ಹಸ್ತದ ಗುರುತಿಗೆ ಹಾಕಿ. ಐದು ಬೆರಳು ಸೇರಿ ʼಕೈʼ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ʼಕೈʼ ಗಟ್ಟಿಯಾಯಿತು. ಈ ʼಕೈʼ ಗುರುತಿಗೆ ನಿಮ್ಮ ಬೆಂಬಲ ನೀಡಿ" ಎಂದು ಮನವಿ ಮಾಡಿದರು.
ಕುಮಾರಣ್ಣನಿಗೆ ಕೂಲಿ ಕೇಳುವ ಹಕ್ಕಿಲ್ಲ!
"ಕಳೆದ ಮೂರ್ನಾಲ್ಕು ತಿಂಗಳಲ್ಲಿ ಚನ್ನಪಟ್ಟಣಕ್ಕೆ 500 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಶಾಲೆಗಳ ಅಭಿವೃದ್ಧಿ, ಸೇತುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ. ಕುಮಾರಣ್ಣನಿಗೆ ಕೂಲಿ ಕೇಳುವ ಹಕ್ಕು ಇಲ್ಲ" ಎಂದು ಡಿಕೆಶಿ ಹೇಳಿದರು.
"ಕುಮಾರಸ್ವಾಮಿ ಅವರದ್ದು ಕೇವಲ ಖಾಲಿ ಮಾತು. ನಿಮ್ಮ ಬದುಕು, ಅಭಿವೃದ್ಧಿ ನಮ್ಮ ಜವಾಬ್ದಾರಿ. ರೈತರಿಗೆ ಏನಾದರೂ ಸಹಾಯ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಸಮಾಜಕ್ಕೆ ಸೇವೆ ಮಾಡುವವರನ್ನು ನಮ್ಮ ಜನರು ಗುರುತಿಸುತ್ತಾರೆ, ಆರಾಧಿಸುತ್ತಾರೆ, ಪೂಜಿಸುತ್ತಾರೆ. ಹೀಗಾಗಿ ರಾಮನ ತಂದೆ ದಶರಥ ಮಹಾರಾಜನಿಗಿಂತ ರಾಮನ ಭಂಟ ಹನುಮಂತನಿಗೆ ಹೆಚ್ಚು ದೇವಾಲಯ ಕಟ್ಟಲಾಗಿದೆ. ಅದೇ ರೀತಿ ನಿಮ್ಮ ಸೇವೆ ಮಾಡುವವರನ್ನು ಗುರುತಿಸುತ್ತೀರಿ ಎಂದು ಇಲ್ಲಿ ಭಾಷಣ ಮಾಡುತ್ತಿದ್ದೇನೆ" ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ರಂಗೇರಿದ ಮೂರು ಕ್ಷೇತ್ರಗಳ ಉಪಚುಣಾವನೆ
ಏನೂ ಕೆಲಸ ಮಾಡದ ಕುಮಾರಸ್ವಾಮಿ!
"ನಾನು ಬಿಸಿಲಮ್ಮ ದೇವಾಲಯ, ಮಹದೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದೆ. ಈ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದು ಯಾರು ಎಂದು ಕೇಳಿದಾಗ, ಸಿ.ಪಿ.ಯೋಗೇಶ್ವರ್ ಎಂದು ಇಲ್ಲಿನ ಜನರೇ ಹೇಳಿದರು. ನಾನು ಇಂಧನ ಸಚಿವನಾಗಿದ್ದಾಗ HVD ಯೋಜನೆಯಲ್ಲಿ 22 ಸಾವಿರ ರೈತರಿಗೆ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಿಕೊಟ್ಟೆ. ಈ ರೀತಿ ಕುಮಾರಸ್ವಾಮಿ ಅವರು ಯಾವುದಾದರೂ ಒಂದು ದೇವಾಲಯಕ್ಕೆ ಸಹಾಯ ಮಾಡಿದ್ದಾರಾ? ಸಮುದಾಯ ಭವನ ನಿರ್ಮಿಸಿದ್ದಾರಾ? ಸ್ಮಶಾನಕ್ಕೆ ಜಮೀನು ಕೊಡಿಸಿದ್ದಾರಾ? ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರಾ? ಅವರು ಸಿಎಂ ಆಗಿದ್ದಾಗ ಅವರ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಿದ್ದಾರಾ? ಇಲ್ಲ, ಆದರೂ ಯಾವ ಧೈರ್ಯದ ಮೇಲೆ ಮತ ಕೇಳುತ್ತಾರೆ?" ಎಂದು ಡಿಕೆಶಿ ಪ್ರಶ್ನಿಸಿದರು.
ನಾವು ಚನ್ನಪಟ್ಟಣಕ್ಕೆ ಹೋರಾಡುತ್ತಿದ್ದೇವೆ!
"ನಾವು ಈ ಜಿಲ್ಲೆಯವರು. ನಾವು ಸತ್ತರೆ ಇಲ್ಲೇ ಮಣ್ಣು ಮಾಡುತ್ತಾರೆ. ನಮ್ಮ ಪಲ್ಲಕ್ಕಿ ಹೊರುವವರು ನೀವೇ, ಚಟ್ಟ ಹೊರುವವರು ನೀವೇ. ಯೋಗೇಶ್ವರ್ ಸತ್ತರೆ ಅವರ ದೇಹವನ್ನು ಹೂಳುವುದು ಚಕ್ಕೆರೆಯಲ್ಲೇ. ಹೀಗಾಗಿ ನಾವು ಈ ಚನ್ನಪಟ್ಟಣದಲ್ಲಿ ಹೋರಾಡುತ್ತಿದ್ದೇವೆ" ಎಂದು ಡಿಕೆಶಿ ಇದೇ ವೇಳೆ ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ