ಬೆಂಗಳೂರು: ವೃತ್ತಿ ಆಧರಿತ ಕೌಶಲ್ಯ ಹೊಂದಿರುವಂಥ ವಿಶ್ವಕರ್ಮ ಜನಾಂಗದವರ ವಿದ್ಯೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಸರ್ಕಾರ ಗಮನಹರಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಪೌರತ್ವ ತಿದುದ್ದಪಡಿ ಕಾಯ್ದೆ (Citizenship Amendment Act) ಕುರಿತಂತೆ ಜನಜಾಗೃತಿ ಮೂಡಿಸಲು ಸರ್ಕಾರ ಹಮ್ಮಿಕೊಂಡಿರುವ 'ಮನೆ ಮನೆ ಸಂಪರ್ಕ ಅಭಿಯಾನ'ದ ಭಾಗವಾಗಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು  ಜ್ಞಾನ ಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, "ವೃತ್ತಿ ಆಧಾರಿತ, ಕೌಶಲ್ಯ ಇರುವ ವಿಶ್ವಕರ್ಮ ಜನಾಂಗದವರ ವಿದ್ಯೆಯನ್ನು ಮುಂದಿನ ಪೀಳಿಗೆಯವರು ಕಲಿಯುವಂತಾಗಬೇಕು. ಈ ಸಂಬಂಧ ಕಂಬಾರರ ಸಲಹೆ ಅತ್ಯುತ್ತಮವಾಗಿದ್ದು, ಅದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುವುದು," ಎಂದು ಭರವಸೆ ನೀಡಿದರು.



'ವೈಜ್ಞಾನಿಕ ಹಿನ್ನಲೆಯ ವಿಶೇಷ ಕೌಶಲಗಳ ಪುನರುಜ್ಜೀವನ ಆಗಬೇಕು. ಈ ನೆಲದ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಕಂಬಾರರ ಮಾರ್ಗದರ್ಶನ ಪಡೆಯಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ಯೋಜನೆಗೆ ಒತ್ತು ನೀಡಿ, ಪ್ರೋತ್ಸಾಹ ನೀಡುವರು.  ಕೌಶಲ್ಯ ಕಲಿಕೆ ಬಹಳ ಮಹತ್ವದ ವಿಚಾರವಾದ್ದರಿಂದ ಕೂಡಲೇ ಇದನ್ನು ಕಾರ್ಯರೂಪಕ್ಕೆ ತರಲಾಗುವುದು, "ಎಂದರು. 


*ಕಂಬಾರರ ಮನವಿ*
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಚಂದ್ರಶೇಖರ ಕಂಬಾರರು, "ಕರಕುಶಲ ಕಲೆಗೆ ಈ ಸರ್ಕಾರ ಹೆಚ್ಚು ಒತ್ತು ಕೊಡುತ್ತಿದೆ.  ಇಂಥ ವಿದ್ಯೆಗಳ ಕಲಿಕೆಗೆ ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ನನ್ನ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯ ಪೂರಕವಾಗಿ ಸ್ಪಂದಿಸಿದ್ದು ನನಗೆ ಖುಷಿ ತಂದಿದೆ," ಎಂದು ತಿಳಿಸಿದರು.


"ನಮ್ಮ ವಿದ್ಯೆ ಅಂದರೆ ವಿಶ್ವಕರ್ಮ ಸಮುದಾಯದವರ ಪಾರಂಪರಿಕ ವಿದ್ಯೆಗಳ ಬಗ್ಗೆ ವಿದೇಶಿಯರು ಇಂದು ಹೆಚ್ಚು  ಆಸಕ್ತಿ ವಹಿಸುತ್ತಿದ್ದಾರೆ.  ಕಲ್ಲಿನ ಬಗ್ಗೆ ನಾವು ಹೇಗೆ ಅಧ್ಯಯನ ಮಾಡುತ್ತೇವೆ ಎಂಬುದನ್ನು ಅವರು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ವಿದೇಶಗಳಲ್ಲಿ ನಮ್ಮ ವಿದ್ಯೆಯ ಅಭ್ಯಾಸ ನಡೆಯುತ್ತಿದೆ. ಇಲ್ಲಿ ನಮ್ಮ ವಿದ್ಯೆಗಳು ನಾಶ ವಾಗುತ್ತಿದೆ. ನಾವು ನಮ್ಮ ವಿದ್ಯೆಗಳನ್ನು ಕಳೆದುಕೊಳ್ಳಬಾರದು. ಮುಂದಿನ ಪೀಳಿಗೆಯವರು ಇಂಥ ವಿದ್ಯೆ ಕಲಿಯುವಂತಬೇಕು. ಈ ಕುರಿತ ನಮ್ಮ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವುದು ಸಂತೋಷ," ಎಂದರು.