ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸಾರಿಗೆ ನೌಕರರ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭರವಸೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ನೇತೃತ್ವದಲ್ಲಿ ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಪದಾಧಿಕಾರಿಗಳು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಸದಾಶಿವನಗರ ಗೃಹ ಕಚೇರಿಗೆ ಆಗಮಿಸಿ, ರಾಜ್ಯ ರಸ್ತೆ ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಿದರು. 


ಬಳಿಕ ಮಾತನಾಡಿದ ಅವರು, ಫೆಡರೇಷನ್‌ನ ಪದಾಧಿಕಾರಿಗಳು ಇಂದು ವಿವಿಧ ಬೇಡಿಕೆ ಈಡೇರಿಸಲು ಸಾರಿಗೆ ನೌಕರರ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಬಸ್‌ ಪಾಸ್‌ ವೆಚ್ಚದ ಬಾಬ್ತು ಭರಿಸುವುದು, ನಾಲ್ಕು ನಿಗಮದ ಬದಲು ಒಂದೇ ನಿಗಮ ಮಾಡುವುದು ಸೇರಿದಂತೆ ಅನೇಕ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗುವುದು. ಅಲ್ಲದೆ, ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರದಲ್ಲೇ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.