ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ದುರಂತದ ಸಾವಿನ ಸರಮಾಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, 17ಕ್ಕೆ ಏರಿದೆ. 


COMMERCIAL BREAK
SCROLL TO CONTINUE READING

ಕಳೆದ 9 ದಿನಗಳಿಂದ ಜಿಲ್ಲೆಯ ಸುಯೋಗ್ ಆಸ್ಪತ್ರೆಯ ವೆಂಟಿಲೇಟರ್​​​​​​ನಲ್ಲಿ ಚಿಕಿತ್ಸೆ ಪಡೆಯುತಿದ್ದ ರಂಗನ್(45) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. 


ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರಂಗನ್, ಪತ್ನಿ ಮತ್ತು ಮಗು ಜೊತೆ ಬಂದು ಪ್ರಸಾದ ಸೇವಿಸಿದ್ದರು. ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ರಂಗನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಗಳು ಅನು ಸಹ ಸುಯೋಗ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅತ್ತ ಪತ್ನಿ ಈಶ್ವರಿ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಮೃತ ರಂಗನ್ ಸೋದರ ಮುತ್ತುರಾಜ್ ಆತಂಕ ವ್ಯಕ್ತಪಡಿದ್ದಾರೆ. 


ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಈಗಾಗಲೇ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವ ಸ್ವಾಮಿ, ಮಾರಮ್ಮ ಟ್ರಸ್ಟ್‌ನ ಮ್ಯಾನೇಜರ್‌ ಮಾದೇಶ್‌, ಆತನ ಪತ್ನಿ ಅಂಬಿಕಾ, ನಾಗರಕೊಯ್ಲಿಯಲ್ಲಿರುವ ನಾಗ ದೇವರ ಅರ್ಚಕ ದೊಡ್ಡಯ್ಯ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಪ್ರಸಾದ ಸೇವಿಸಿ ಪ್ರಾಣ ತೆರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 


ಡಿಸೆಂಬರ್‌ 14 ರಂದು ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ಎರಡು ಗುಂಪುಗಳ ನಡುವಿನ ವೈಷಮ್ಯದಿಂದಾಗಿ ಪ್ರಸಾದದಲ್ಲಿ ಕೀಟನಾಶಕ ಬೆರೆಸಿದ ಪರಿಣಾಮ ಈ ದುರಂತ ಸಂಭವಿಸಿತ್ತು. ಆರಂಭದಲ್ಲಿ 14 ಮಂದಿ ಸಾವನ್ನಪ್ಪಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಹಲವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.