ಹಣ ಸಂದಾಯ ಆಗದಿದ್ದರೆ ಗಮನಕ್ಕೆ ತನ್ನಿ: ಸಚಿವ ಎಸ್.ಟಿ. ಸೋಮಶೇಖರ್
ರಾಜ್ಯ ಸರ್ಕಾರದ ಸಹಕಾರ ಇಲಾಖೆ ವತಿಯಿಂದ ಕೋವಿಡ್ -19 ವಿರುದ್ಧ ಹೋರಾಡಿದ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ.
ಚಿತ್ರದುರ್ಗ: ರೈತರಿಗೆ ಪ್ರಸಕ್ತ ಸಾಲಿನಲ್ಲಿ 14 ಸಾವಿರ ಕೋಟಿ ರೂಪಾಯಿ ಸಾಲವನ್ನು ಸಹಕಾರ ಇಲಾಖೆ ವತಿಯಿಂದ ಕೊಡಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೂ ಸಾಲ ವಿತರಣೆ ಮಾಡುವ ಚಿಂತನೆ ಇದೆ. ಶೀಘ್ರದಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ರಾಜ್ಯ ಸರ್ಕಾರದ ಸಹಕಾರ ಇಲಾಖೆ ವತಿಯಿಂದ ಕೋವಿಡ್ -19 (Covid-19) ವಿರುದ್ಧ ಹೋರಾಡಿದ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡುವ ತಲಾ 3 ಸಾವಿರ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಬಡವರಬಂಧು ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿದೆ. ಇದೇ ರೀತಿ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳಿಗೂ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಇದೇ ರೀತಿ ಕಡಿಮೆ ಬಡ್ಡಿಗೆ ಆಶಾ ಕಾರ್ಯಕರ್ತೆಯರಿಗೂ ಸಾಲ ನೀಡುವ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೊಸೈಟಿ ಘೋಷಿಸಿದ ಸಹಕಾರ ಸಚಿವ
ಕೊರೋನಾ ಸಂಕಷ್ಟಗಳ ಕಾಲದಲ್ಲಿ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಸಹಕಾರ ಇಲಾಖೆಯ ವತಿಯಿಂದ 52 ಕೋಟಿ ರೂಪಾಯಿಯನ್ನು ಸಂಗ್ರಹಿಸಿಕೊಟ್ಟಿದ್ದೇನೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯದಲ್ಲಿರುವ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯನ್ನು ತರಲಾಗುತ್ತಿದೆ. ಇದಕ್ಕೆ ಬೇಕಾಗುವ 12.7 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆಯಿಂದಲೇ ಭರಿಸಲಾಗುತ್ತಿದೆ. ಇದಕ್ಕೆ ಲಾಭದಲ್ಲಿರುವ ಸಹಕಾರ ಇಲಾಖೆ ವ್ಯಾಪ್ತಿಯ ಬ್ಯಾಂಕ್ ಗಳಿಂದ ಹಣವನ್ನು ಸಂಗ್ರಹ ಮಾಡಲಾಗುತ್ತಿದೆ. ಹಣ ಸಂದಾಯ ಆಗದಿದ್ದರೆ ಸಹಕಾರ ಇಲಾಖೆ ಗಮನಕ್ಕೆ ತರಬೇಕು. ಯಾರಿಗೂ ಹಣ ಸಿಗದೇ ಇರಕೂಡದು ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ, ವರದಿ ನೋಡಿ ಕ್ರಮ: ಎಸ್.ಟಿ. ಸೋಮಶೇಖರ್
ಶಾಸಕರಾದ ಕೆ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಅಧಿಕಾರಿಗಳು ಹಾಗೂ ಇನ್ಯಾರದ್ದೋ ಬಗ್ಗೆ ಚಿಂತಿಸದೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಂತಹ ವಿಶೇಷ ಗುಣ ಇರುವ ಮಂತ್ರಿಗಳು ಸಿಗುವುದು ಅಪರೂಪ ಎಂದು ಹೇಳಿದರು. ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ್, ಶಾಸಕರಾದ ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್ ಇತರರು ಇದ್ದರು.