ಕನ್ನಡ ಸಂಸ್ಕೃತಿಯ ಕಂಪನ್ನು ಜಗತ್ತಿನುದ್ದಗಲಕ್ಕೂ ಪಸರಿಸಿದ ಕೀರ್ತಿ `ಕಾರ್ನಾಡ್` ಅವರದ್ದು!
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಇತಿಹಾಸ, ಪುರಾಣ ಕಥೆಗಳನ್ನು ಆಧರಿಸಿ ಬರೆದ ನಾಟಕಗಳು ಇಂದಿನ ವಸ್ತುಸ್ಥತಿಯನ್ನು ವಿಶ್ಲೇಷಿಸುವ ಗಿರೀಶ್ ಕಾರ್ನಾಡ್ ಅವರ ರೀತಿ ಅಪೂರ್ವವಾದುದು. ಅವರ ನಾಟಕಗಳು ದೇಶ- ವಿದೇಶದ ಹಲವು ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡವು. ಆ ಮೂಲಕ ಕನ್ನಡ ಸಂಸ್ಕೃತಿಯ ಕಂಪನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿದ ಕೀರ್ತಿ ಅವರದು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಚಲನಚಿತ್ರರಂಗದಲ್ಲಿ ನಟನೆ ಹಾಗೂ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿದರು. ನಾಡಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಹೊಳಪು ನೀಡಿದ ಅಗಾಧ ಪ್ರತಿಭೆಯನ್ನು ನಾವು ಇಂದು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.