ಬೆಂಗಳೂರು: ನಾಡ ದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನುಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಂತಿಮಗೊಳಿಸಿದೆ.ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ನೀಡಿದ ಶಿಫಾರಸನ್ನು ಸರಕಾರ ಒಪ್ಪಿಕೊಂಡಿದೆ. ಬೆಂಗಳೂರು ವಿವಿ ಆವರಣದಲ್ಲಿ ಸ್ಥಾಪಿಸುವ ನಾಡದೇವಿ ಪ್ರತಿಮೆ ಇದೇ ಆಗಿರುತ್ತದೆ ಎಂದು ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯದ ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರದ ವೈಶಿಷ್ಟ್ಯತೆ ಕುರಿತು  ಸಂಕ್ಷಿಪ್ತ ಮಾಹಿತಿ


ಹಲವಾರು ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯದ ನಾಡದೇವತೆಯ ಭಾವಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವತೆಗಳ ಚಿತ್ರಗಳನ್ನು ಬಳಸಲಾಗುತ್ತಿದ್ದು,  ಒಂದು ನಿರ್ದಿಷ್ಠವಾದ ಚಿತ್ರಕೃತಿಯ ಕೊರತೆಯಿರುವುದನ್ನು ಮನಗಂಡ ಸರ್ಕಾರವು ಒಂದು ನಿರ್ದಿಷ್ಟವಾದ ಚಿತ್ರವನ್ನು ಆಯ್ಕೆ ಮಾಡಲು ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಿರುತ್ತದೆ.


ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ


ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಸಮಿತಿ ಸೂಚಿಸಿರುವಂತೆ  ಕಲಾವಿದರಾದ ಶ್ರೀ ಸೋಮಶೇಖರ್.ಕೆ, ಬೆಂಗಳೂರು ಇವರಿಗೆ ಚಿತ್ರ ಸಿದ್ಧಪಡಿಸಿ ಸಲ್ಲಿಸಲು ಕೋರಲಾಗಿ ಸದರಿಯವರು ಚಿತ್ರವನ್ನು ಸಿದ್ದಪಡಿಸಿರುತ್ತಾರೆ.ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಭಾವಚಿತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.


1.           ನಾಡದೇವತೆಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ ಇರುತ್ತದೆ.


2.           ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವ ಕಂಗೊಳಿಸಿದೆ.


3.           ದ್ವಿಭುಜ ಅಂದರೆ ಎರಡು ಕೈಗಳು ವಾಸ್ತವಿಕತೆಗೆ ಹತ್ತಿರವಾಗಿದೆ.


4.           ಬಲಗೈಯಲ್ಲಿ ಅಭಯ ಮುದ್ರೆ ಸಾಂಕೇತಿಕವಾಗಿ ರಕ್ಷಣೆ ನೀಡುತ್ತಿದ್ದರೆ, ಎಡಗೈಯಲ್ಲಿರುವ ತಾಳೆಗರಿ ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಪ್ರವಹಿಸುವ ನಿಟ್ಟನ್ನು ಸೂಚಿಸುತ್ತಿದೆ.


5.           ನಾಡದೇವತೆಯು ಕುಳಿತಿರುವ ಭಂಗಿಯು ಭವ್ಯತೆಯನ್ನು ಹಾಗೂ ಸಾಕ್ಷ್ಯತೆಯನ್ನು ಪ್ರತಿಬಿಂಬಿಸುತ್ತಿದೆ.


6.           ಕರ್ನಾಟಕದ ಧ್ವಜ ಕನ್ನಡಾಭಿಮಾನದ ಸಂಕೇತವಾಗಿ ರಾರಾಜಿಸುತ್ತಿದೆ.


7.           ಹಸಿರು ಸೀರೆಯು ಸಿರಿ ಸಂಪದ ಸಮೃದ್ಧಿಯನ್ನು ಸೂಚಿಸುತ್ತಿದೆ.


8.           ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು ನಮ್ಮ ನಾಡನ್ನು ಆಳಿದ ಸಾಮ್ರಾಜ್ಯಗಳ ವೈಭವವನ್ನು ಸಾರುತ್ತಿವೆ.


9.           ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಭುಜದ ಮೇಲೆ ಕರ್ನಾಟಕ ವೈಶಿಷ್ಟ್ಯದ ಸಿಂಹ ಲಾಂಛನ ಭುಜಕೀರ್ತಿಗಳು, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ - ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ನಡುವೆ ಹೊಯ್ಸಳ ಲಾಂಛನದ ಪದಕ ನಾಡದೇವತೆಯನ್ನು ಅಲಂಕರಿಸಿದೆ. ಕಾಲಿನಲ್ಲಿ ಕಡಗ, ಋಳಿ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು ಸೌಭಾಗ್ಯದ್ಯೋತಕಗಳಾಗಿವೆ. ತೆಳುವಾದ-ಮೃದುವಾದ ಹೂವಿನ ತೋಮಾಲೆಯು ನಾಡದೇವತೆಯ ಸಂಪೂರ್ಣ ಅಲಂಕಾರಕ್ಕೆ ಒಂದು ರೀತಿಯ ಮೆರಗು ನೀಡಿದೆ. ಕೆಳಗೆ ಸುಂದರ ಸದೃಢ ತಾವರೆ ಹೂವು(ಕಮಲ) ದೇವಿಯ ಮೃದುವಾದ ಕಾಲುಗಳಿಗೆ ಆಸರೆ ನೀಡಿದೆ.


ಇದನ್ನೂ ಓದಿ: ಜೆಡಿಎಸ್‍ಗೆ ಬಹುಮತ; ಕಾಂಗ್ರೆಸ್-ಬಿಜೆಪಿ ಜೊತೆ ಮತ್ತೊಮ್ಮೆ ಸರ್ಕಾರ ಮಾಡಲ್ಲ- ನಿಖಿಲ್ ಕುಮಾರಸ್ವಾಮಿ


10.         ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ, ಸಸ್ಯಕಾಶಿಯು ಸೊಬಗನ್ನು ನೂರ್ಮಡಿಸಿದೆ.


ಒಟ್ಟಿನಲ್ಲಿ  ಕರ್ನಾಟಕ ರಾಜ್ಯದ ನಾಡದೇವತೆಯ ಈ ಚಿತ್ರವು ಸುಲಕ್ಷಣವಾಗಿ ಕರ್ನಾಟಕದ ಅಭಿಮಾನ, ಜ್ಙಾನ ಸಂಪತ್ತು, ಸಸ್ಯ ಸಮೃದ್ಧಿ, ಸಿರಿಸಂಪದವನ್ನು ಪ್ರತಿಬಿಂಬಿಸುವ ನೈಜ ಸ್ವರೂಪವಾಗಿದೆ. ಹೀಗಾಗಿ ಈ ಚಿತ್ರ ದಿವ್ಯ-ಭವ್ಯ ಕರ್ನಾಟಕ ನಾಡದೇವತೆಯ, ಕನ್ನಡಾಂಬೆಯ, ಕರ್ನಾಟಕ ಮಾತೆಯ ಚಿತ್ರದ ವೈಶಿಷ್ಟ್ಯಗಳಾಗಿವೆ.


ಹಿಂದೆ ರಚಿಸಿರುವ ಚಿತ್ರಗಳು ಸುಂದರವಾಗಿದ್ದರೂ, ಅಲ್ಲಿ ಕರ್ನಾಟಕದ ವೈಶಿಷ್ಟ್ಯತೆಯನ್ನು ಬಿಂಬಿಸುವಲ್ಲಿ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ ಒಂದು ಅಧಿಕೃತ ಕರ್ನಾಟಕ ರಾಜ್ಯದ ನಾಡದೇವತೆಯ ಚಿತ್ರದ ಅವಶ್ಯಕತೆ ಹಿನ್ನೆಲೆಯಲ್ಲಿ ಸದರಿ ಚಿತ್ರವನ್ನು ರಚಿಸಲಾಗಿರುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.