ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ. ಕರ್ನಾಟಕ ಕರೋನಾ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈಶ್ವರಪ್ಪ ಮುನ್ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಲಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ಸುದ್ದಿಗೋಷ್ಟಿ ‌ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಲಗಿದೆ. ಈ ಇಲಾಖೆ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಬೇಸಿಗೆ ಆರಂಭವಾಗಿದ್ದು, ಬರ ಎದುರಾಗುವ ಪರಿಸ್ಥಿತಿ ಇದೆ. ಈ ಹಂತದಲ್ಲಿ ಹಳ್ಳಿಗಳಲ್ಲಿ ಜನರಿಗೆ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇನ್ನು ನರೇಗಾ ಉದ್ಯೋಗ ಖಾತ್ರೆ ಯೋಜನೆ ಮುಂದುವರಿಸಿ ದಿನಕ್ಕೆ 275 ರೂಪಾಯಿ ನೀಡುವುದಾಗಿ ಪ್ರಧಾನಮಂತ್ರಿಗಳೇ ತಿಳಿಸಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೆ ತಿಂಗಳಿಗೆ 8-9 ಸಾವಿರ ನೀಡಲು ಹಾಗೂ ಒಂದು ಪಂಚಾಯ್ತಿ 4-5 ಕೋಟಿ ಖರ್ಚು ಮಾಡಲು ಅವಕಾಶವಿದೆ. ನನ್ನ ಕ್ಷೇತ್ರ ಕನಕಪುರದಲ್ಲಿ ಈ ಅನುದಾನವನ್ನು ಹೆಚ್ಚು ಬಳಸಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಜನರು ವೈಯಕ್ತಿಕವಾಗಿ ಉದ್ಯೋಗ ಮಾಡಲು ಪಂಚಾಯ್ತಿ ಮಟ್ಟದಲ್ಲಿ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಉದ್ಯೋಗ ಮಾಡಲು ಬರುವವರ ನೋಂದಣಿ ಮಾಡಿಕೊಂಡು, ಪರಿಶೀಲನೆ ನಡೆಸಿ ದುಡ್ಡು ಕೊಡುವುದಷ್ಟೇ ನಿಮ್ಮ ಕೆಲಸ. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಮುಂದಿನ ಎರಡು ಮೂರು ದಿನಗಳಲ್ಲಿ ಸರ್ಕಾರ ಈ ಕೆಲಸ ಮಾಡದಿದ್ದರೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾನು ವಿಡಿಯೋ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದು ಹೇಳಿದರು.


ಮಾತಿಗೆ ತಕ್ಕಂತೆ ಕೋಮು ಸಾಮರಸ್ಯ ಕದಡುವರ ವಿರುದ್ದ ಕ್ರಮ ಕೈಗೊಳ್ಳಿ: ಬಿಎಸ್‌ವೈಗೆ ಡಿಕೆಶಿ ಸಲಹೆ


ಮುಂದಿನ ದಿನಗಳಲ್ಲಿ ಉದ್ಯೋಗ ಇಲ್ಲದೇ ಹಣ ಸಿಗದಿದ್ದರೆ ಜನ ಎಲ್ಲಿ ಕಳ್ಳತನದಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಳಿಯುತ್ತಾರೋ ಎಂಬ ಭಯ ಹುಟ್ಟುಕೊಂಡಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಡಿಸುವುದು ಇಲಾಖೆಯ ಕೆಲಸ ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.


ನಮ್ಮಲ್ಲಿ ಹಾಲು ಒಕ್ಕೂಟ ಸೇರಿದಂತೆ ಅನೇಕ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿದ್ದು, ಪ್ರತಿಯೊಂದು ಹಳ್ಳಿಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಈ ಸಹಕಾರಿ ಸಂಘಗಳನ್ನು ಬಳಸಿಕೊಂಡು ರೈತರು ಬೆಳೆದ ಹಣ್ಣು, ತರಕಾರಿ, ಸೊಪ್ಪುಗಳನ್ನು ಸರ್ಕಾರ ಖರೀದಿಸಿ ಅವುಗಳನ್ನು ತಾಲೂಕು, ಜಿಲ್ಲಾ ಮಟ್ಟದ ನಗರಗಳಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಮಾರಾಟ ಮಾಡಬೇಕು. ಇದು ಲಾಭ ಮಾಡುವ ಕೆಲಸವಲ್ಲ. ಈ ಕೆಲಸ ಮಾಡಲು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುವುದಿಲ್ಲ. ಇನ್ನು ಶಿವಮೊಗ್ಗ ಹಾಗೂ ಮಲೆನಾಡು ಭಾಗಗಳಿಂದಲೂ ನನಗೆ ಹೆಚ್ಚಿನ ಕರೆ ಬರುತ್ತಿದ್ದು, ಅಡಿಕೆ ಬೆಳೆಗಾಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.


ಇಂದು ವಿಶ್ವ ಆರೋಗ್ಯ ದಿನ. ಸದ್ಯ ವೈದ್ಯರು ನಮ್ಮ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಔಷಧ, ವೈದ್ಯಕೀಯ ಉಪಕರಣ ತಯಾರಕರಿಂದ ಹಿಡಿದು, ವೈದ್ಯರು, ನರ್ಸ್ ಗಳಿಗೆ ಅಭಿನಂದನೆ ಸಲ್ಲಿಸಿ ಶುಭಕೋರುತ್ತೇನೆ. ಸದ್ಯ ಕೆಲವು ಆಸ್ಪತ್ರೆ ಕ್ಲಿನಿಕ್ ಗಳನ್ನು ಮುಚ್ಚಲಾಗಿದೆ. ಹೀಗಾಗಿ ಅನೇಕ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಇಚ್ಛೆ ಇದ್ದರೂ ಮನೆಯಲ್ಲೇ ಸಿಲುಕಿದ್ದಾರೆ. ಇವರನ್ನು ಗುರುತಿಸಿ ಇವರಿಗೆ ವಿಶೇಷ ಕಾರ್ಡ್ ನೀಡಿ ಅವರು ಆರೋಗ್ಯ ಸೇವೆ ನೀಡಲು ಅವಕಾಶ ಮಾಡಿಕೊಡಬೇಕು. ಸರ್ಕಾರಿ ಆಸ್ಪತ್ರೆಗಳು ಕೇವಲ ಕೊರೋನಾ ಪ್ರಕರಣ ಮಾತ್ರ ನೋಡುವುದಾಗಿ ಹೇಳಿದ್ದು, ಬೇರೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಹೊತ್ತಲ್ಲಿ ಈ ವೈದ್ಯರ ಸೇವೆ ಬಳಸಿಕೊಳ್ಳಬೇಕು. ರಾಜ್ಯದಲ್ಲಿ ಯಾವುದೇ ವ್ಯಕ್ತಿಯೂ ಚಿಕಿತ್ಸೆ ಸಿಗದೇ ಸಾಯಬಾರದು ಎಂಬುದು ನಮ್ಮ ಕಾಳಜಿಯಾಗಿದೆ ಎಂದು ತಿಳಿಸಿದರು.