ಎತ್ತಿನಹೊಳೆಗೆ ಒಳಪಡುವ ಜಮೀನಿಗೆ ಸಮಾನ ಬೆಲೆ ಒದಗಿಸಲು ಪ್ರಸ್ತಾಪ; ಉಪಮುಖ್ಯಮಂತ್ರಿ
ಹೇಮಾವತಿ ನಾಲೆ ಮೂಲಕ ಎಲ್ಲಾ ತಾಲೂಕುಗಳಿಗೂ ಈ ಮೊದಲು ನಿಗದಿ ಪಡಿಸಿರುವಂತೆ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಹೇಮಾವತಿ ನಾಲೆಗೆ ಲಿಂಕ್ ಕೆನಾಲ್ ನಿರ್ಮಾಣ ಸಂಬಂಧ ಚರ್ಚಿಸಲಾಯಿತು.
ಬೆಂಗಳೂರು: ಹೇಮಾವತಿ ನಾಲೆಯ "ಲಿಂಕ್ ಕೆನಾಲ್" ನಿರ್ಮಾಣ ಹಾಗೂ ಎತ್ತಿನ ಹೊಳೆ ಯೋಜನೆಗೆ ಮುಳುಗಡೆಯಾಗುವ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ 5,500 ಎಕರೆ ಜಮೀನಿಗೆ ಸಮಾನ ಪರಿಹಾರ ಮೊತ್ತ ನಿಗದಿ ಮಾಡುವ ಕುರಿತು ಸಚಿವ ಸಂಪುಟದ ಉಪಸಮಿತಿ ಮುಂದೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳು ಹಾಗೂ ಎತ್ತಿನಹೊಳೆ ಯೋಜನೆಯ ಭೂಸಂತ್ರಸ್ತರಿಗೆ ಸಮಾನ ಪರಿಹಾರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಗೆ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.
ಹೇಮಾವತಿ ನಾಲೆ ಮೂಲಕ ಎಲ್ಲಾ ತಾಲೂಕುಗಳಿಗೂ ಈ ಮೊದಲು ನಿಗದಿ ಪಡಿಸಿರುವಂತೆ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಹೇಮಾವತಿ ನಾಲೆಗೆ ಲಿಂಕ್ ಕೆನಾಲ್ ನಿರ್ಮಾಣ ಸಂಬಂಧ ಚರ್ಚಿಸಲಾಯಿತು. ಈ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯವನ್ನು ನೀಡಿದರು. ಈ ಬಗ್ಗೆ ಉಪಸಮಿತಿಯ ಮುಂದಿಡಲಾಗುತ್ತದೆ. ಸಮಿತಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ದೊಡ್ಡಬಳ್ಳಾಪುರ ಹಾಗೂ ತುಮಕೂರಿನ ಕೊರಟಗೆರೆಯ 5,500 ಎಕರೆ ಒಳಪಡಲಿದೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಈ ಭಾಗದ ಜಮೀನಿಗೆ ಸಮಾನ ರೀತಿಯ ಬೆಲೆ ಕೊಡುವುದು ಅಗತ್ಯ. ದೊಡ್ಡಬಳ್ಳಾಪುರಕ್ಕೆ ಹೆಚ್ಚು ಹಾಗೂ ಕೊರಟಗೆರೆಗೆ ಕಡಿಮೆ ಬೆಲೆ ನೀಡುವುದು ಸರಿಯಲ್ಲ. ಹೀಗಾಗಿ ಈ ಬಗ್ಗೆಯೂ ಸಹ ಉಪಸಮಿತಿಯ ಮುಂದಿಡಲಾಗುವುದು ಎಂದು ಪರಮೇಶ್ವರ ಭರವಸೆ ನೀಡಿದರು.