ನವದೆಹಲಿ: ಸಂವಿಧಾನದ ಕುರಿತು ಕೇಂದ್ರ  ಕೌಶಲ್ಯಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಕ್ಷೇಪ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ನವದೆಹಲಿಯ ಸಫ್ದರ್ ಜಂಗ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡರು, ವಾಸ್ತವದಲ್ಲಿ ಅನಂತಕುಮಾರ್ ಹೆಗಡೆ ಹೇಳಿಕೆ ಪ್ರತಿಕ್ರಿಯೆಗೆ ಅರ್ಹವಾದುದಲ್ಲ. ಮಂತ್ರಿ ಸ್ಥಾನದಲ್ಲಿರುವವರು ಆ ಸ್ಥಾನಕ್ಕೆ ತಕ್ಕದಾದ ರೀತಿಯಲ್ಲಿ ನಡೆದುಕೊಳ್ಳಬೇಕು. ಅನಂತಕುಮಾರ್ ಹೆಗಡೆಗೆ ಅದರ ಅರಿವಿಲ್ಲ ಎನಿಸುತ್ತದೆ ಎಂದು ಹೇಳಿದರು.


ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಕೇವಲ ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಲ್ಲ. ಅವರನ್ನು ಮಂತ್ರಿ ಮಾಡಿರುವ ಪ್ರಧಾನಿ ಮತ್ತು ಆ ಬಿಜೆಪಿ ಪಕ್ಷಕ್ಕೆ ಅಗೌರವ ಸೂಚಿಸುತ್ತದೆ. ಅನಂತಕುಮಾರ್ ಹೆಗಡೆ ಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು‌ ಎಂದು ಹೇಳಿದರು.


ಅನಂತಕುಮಾರ್ ಹೆಗಡೆ ಅವರಿಗೆ ಸಂವಿಧಾನದ ಅಡಿ ಪ್ರಮಾಣ ವಚನ ಸ್ವೀಕರಿಸಿರುವ ಅರಿವಿದೆಯೊ ಇಲ್ಲವೊ ಗೊತ್ತಿಲ್ಲ.‌ ಇಂದು ಅವರು ಕ್ಷಮೆ ಕೇಳಿದ್ದಾರೆ. ಇದು ಇಲ್ಲಿಗೆ ಮುಕ್ತಾಯವಾದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.


ನಂತರ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ದೇವೇಗೌಡರು, ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ ಮಸೂದೆ ತರಲಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಮಸೂದೆ ರಚಿಸಲಾಗಿದೆ. ಮಸೂದೆಯೊಳಗಿರುವ ಮಾಹಿತಿಯಲ್ಲಿ ಕೆಲ ಗೊಂದಲಗಳಿವೆ. ಅವುಗಳ ನಿವಾರಣೆಗಾಗಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತೆಗೆ ವಹಿಸಬೇಕು ಎಂದು ಹೇಳಿದರು.


ರೈಲ್ವೆ ಯೋಜನೆಗೆ ಮನವಿ


ಇದೇ ವೇಳೆ ರೈಲ್ವೆ ಸಚಿವ ಪಿಯೂಶ್ ಗೋಯಲ್,  ದೇವೇಗೌಡ ಅವರ ನಿವಾಸಕ್ಕೆ ಬಂದು ಅರ್ಧಗಂಟೆಗೂ ಹೆಚ್ಚುಕಾಲ‌ ಚರ್ಚಿಸಿದರು. ಭೇಟಿಯ ವೇಳೆ ದೇವೇಗೌಡರು ರಾಜ್ಯದ ಚಿಕ್ಕಮಗಳೂರು -  ಬೇಲೂರು- ಹಾಸನ ರೈಲ್ವೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಗೋಯಲ್ ಅವರಿಗೆ ಮನವಿ ಮಾಡಿದರು.  ಹಾಸನದಿಂದ ಮೈಸೂರಿಗೆ ಹೊಸ ರೈಲು ಬಿಡುವಂತೆಯೂ ಸಹ ಇದೇ ಸಮಯದಲ್ಲಿ ಮನವಿ ಮಾಡಲಾಗಿದೆ.